ಐಗೂರು, ಮೇ ೪: ಸೋಮವಾರಪೇಟೆ ತಾಲೂಕು ಐಗೂರು ಗ್ರಾಮ ವ್ಯಾಪ್ತಿಯಲ್ಲಿ ಆಶ್ಚರ್ಯ ಹುಟ್ಟಿಸುವ ಅಪರೂಪದ ಬೆಳವಣಿಗೆಯೊಂದು ನಡೆದಿದೆ. ಕಾಜೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಇಂದಿರಾ ಅವರು ನಿವೃತ್ತಿಗೆ ಕೇವಲ ಒಂದು ದಿನ ಬಾಕಿ ಇರುವಾಗ ಸೇವಾ ಹಿರಿತನದ ಆಧಾರದ ಮೇಲೆ ಮುಖ್ಯ ಶಿಕ್ಷಕಿಯಾಗಿ ಪದೋನ್ನತಿ ಪಡೆದಿದ್ದಾರೆ. ಉದ್ಯೋಗ ಪಡೆದ ಪ್ರಾರಂಭದಲ್ಲಿ ಬೇರೆ ಬೇರೆ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸಿ ಕಳೆದ ೧೫ ವರ್ಷಗಳಿಂದ ಕಾಜೂರು ಶಾಲೆಯಲ್ಲಿ ಸೇವೆ ಸಲ್ಲಿಸಿದ್ದ ಶಿಕ್ಷಕಿ ಇಂದಿರಾ ಮೇ ೩೦ ರಂದು ನಿವೃತ್ತಿಯಾಗಬೇಕಿತ್ತು. ಈ ಸಂದರ್ಭದಲ್ಲಿ ಮೇ ೨೯ರಂದು ಪೆರಾಜೆ ಸರ್ಕಾರಿ ಶಾಲೆಗೆ ಮುಖ್ಯ ಶಿಕ್ಷಕಿಯಾಗಿ ಅವರು ಬಡ್ತಿ ಪಡೆದರು.

ಬಡ್ತಿ ಪಡೆದ ದಿನವೇ ಪೆರಾಜೆ ಸರ್ಕಾರಿ ಶಾಲೆಯಲ್ಲಿ ಮುಖ್ಯ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸಿ ಮೇ ೩೦ರಂದು ನಿವೃತ್ತಿ ಹೊಂದಿದ್ದಾರೆ. ಶಿಕ್ಷಕಿ ಇಂದಿರಾ ಅವರನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಪ್ಪ ಅವರ ಸಮ್ಮುಖದಲ್ಲಿ ಕಚೇರಿಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭ ಶಿಕ್ಷಕರ ಸಂಘದ ಅಧ್ಯಕ್ಷ ಬಸವರಾಜು ಸೇರಿದಂತೆ ಇತರ ಶಿಕ್ಷಕರು ಇದ್ದರು.

- ಸುಕುಮಾರ್