ಕುಶಾಲನಗರ, ಮೇ ೪: ಕುಶಾಲನಗರ ವರ್ಕ್ ಶಾಪ್ ಕಾರ್ಮಿಕರ ಸಂಘದ ವತಿಯಿಂದ ಕಾರ್ಮಿಕರ ದಿನ ಹಾಗೂ ಸಂಘದ ೧೬ನೇ ವಾರ್ಷಿಕೋತ್ಸವ ಆಚರಿಸಲಾಯಿತು.
ಖಾಸಗಿ ಹೊಟೇಲ್ ಸಭಾಂಗಣದಲ್ಲಿ ನಡೆದ ಸಭಾ ಕಾರ್ಯಕ್ರಮವನ್ನು ಕುಶಾಲನಗರ ಪಟ್ಟಣ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ಬಿ.ಆರ್. ಪ್ರದೀಪ್ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಕಾರ್ಮಿಕ ದಿನದ ಮಹತ್ವದ ಬಗ್ಗೆ ವಿವರಿಸಿದರು. ಕಾರ್ಮಿಕರು ಕಾನೂನಿನ ಬಗ್ಗೆ ಅರಿವು ಹೊಂದುವುದು ಅತ್ಯಗತ್ಯ. ತಮ್ಮ ಹಕ್ಕುಗಳನ್ನು ಪಡೆದುಕೊಳ್ಳಲು ನಡೆಸುವ ಹೋರಾಟಗಳ ಸಂದರ್ಭ ನಿಯಮಗಳ ಉಲ್ಲಂಘನೆ ಆಗದಂತೆ ಎಚ್ಚರವಹಿಸಬೇಕಿದೆ ಎಂದರು. ಪೊಲೀಸ್ ಇಲಾಖೆ ಸಿಬ್ಬಂದಿಗಳು, ಅಧಿಕಾರಿಗಳು ಕೂಡ ಕಾರ್ಮಿಕರಿಗಿಂತ ಮಿಗಿಲಾಗಿ ಸಮಾಜದ ಸೇವೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡು ದುಡಿಯುತ್ತಿರುವುದು ಹೆಮ್ಮೆಯ ಸಂಗತಿ ಎಂದರಲ್ಲದೆ ಪ್ರತಿಯೊಬ್ಬರೂ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಎಂದು ಹೇಳಿದರು.
ವರ್ಕ್ ಶಾಪ್ ಯೂನಿಯನ್ ಅಧ್ಯಕ್ಷ ಎಂ.ಆರ್.ಪೂವಯ್ಯ ಅಧ್ಯಕ್ಷತೆ ವಹಿಸಿದ್ದರು. ನಗರ ಪೊಲೀಸ್ ಠಾಣಾಧಿಕಾರಿ ಶಿವಣ್ಣ, ಸಂಚಾರಿ ಪೊಲೀಸ್ ಠಾಣಾಧಿಕಾರಿ ಶ್ರೀನಿವಾಸ್ ವೇದಿಕೆಯಲ್ಲಿದ್ದರು. ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ ಕುಶಾಲನಗರದ ಸರ್ಕಾರಿ ಆಸ್ಪತ್ರೆಯ ಒಳರೋಗಿಗಳಿಗೆ ಹಣ್ಣು ಹಂಪಲು ವಿತರಿಸಲಾಯಿತು. ಬಳಿಕ ಗಣಪತಿ ದೇವಾಲಯದ ಬಳಿ ಪಟಾಕಿ ಸಿಡಿಸಿ ಸಂಭ್ರಮಿಸುವ ಮೂಲಕ ನಗರದಲ್ಲಿ ಮೆರವಣಿಗೆ ನಡೆಸಿದರು. ಈ ಸಂದರ್ಭ ಸಂಘದ ಪ್ರಮುಖರಾದ ಸಿ.ಎನ್.ಮದನ್, ಶಿವಕುಮಾರ, ರಂಜಿತ್, ಸಮೀರ್, ವಿನ್ಸೆಂಟ್, ಎನ್.ಸಿ. ಗಣೇಶ್, ಸತೀಶ್, ರವಿ, ಮನು, ಗಣೇಶ್ ಮೊದಲಾದವರಿದ್ದರು.