ಪೊನ್ನಂಪೇಟೆ, ಮೇ ೪: ಪೊನ್ನಂಪೇಟೆ ತಾಲೂಕಿನ ಮುಗುಟಗೇರಿ ಗ್ರಾಮದ ಶ್ರೀ ಕುಟ್ಟಿಚಾತ ದೇವರ ತೆರೆ ಮಹೋತ್ಸವ ಶ್ರದ್ಧಾ ಭಕ್ತಿಯಿಂದ ನೆರವೇರಿತು. ಉತ್ಸವದ ಅಂಗವಾಗಿ ದೇವತೆರೆ, ಗುಳಿಗತೆರೆ ಹಾಗೂ ನುಚ್ಚುಟ್ಟೆ ತೆರೆಗಳು ಸಂಪ್ರದಾಯಬದ್ಧವಾಗಿ ನಡೆಯಿತು. ವಿಶೇಷ ವೇಷಭೂಷಣ, ಭಜನೆ, ತಾಳಮದ್ದಳೆ ಹಾಗೂ ವಿಧಿ ವಿಧಾನಗಳ ಮಧ್ಯೆ ನಡೆದ ತೆರೆ ಕಾರ್ಯಕ್ರಮಗಳು ಭಕ್ತರ ಗಮನ ಸೆಳೆದವು.
ರಾತ್ರಿ ದೇವರ ಆರಾಧನೆ, ಪೂಜಾ ಕಾರ್ಯಗಳು, ಚಾಮುಂಡಿ ತೆರೆ ಹಾಗೂ ಕುಟ್ಟಿಚಾತ ತೆರೆಗಳು ಮಹೋತ್ಸವದ ಪ್ರಮುಖ ಆಕರ್ಷಣೆಯಾಗಿದ್ದು, ನೆರೆದಿದ್ದ ನೂರಾರು ಭಕ್ತರನ್ನು ಮಂತ್ರಮುಗ್ಧರನ್ನಾಗಿಸಿತು. ತೆರೆ ಸಂದರ್ಭದಲ್ಲಿ ಕಲಾವಿದರು ಪ್ರದರ್ಶಿಸಿದ ಭಾವಭಿನಯ, ಸಂಪ್ರದಾಯದ ಶೈಲಿ ಮತ್ತು ದೈವಿಕ ವಾತಾವರಣ ಎಲ್ಲರ ಮನಸ್ಸಿನಲ್ಲಿ ಭಕ್ತಿ ಭಾವವನ್ನು ಮೂಡಿಸಿತು.
ನಂತರ ಸಂಜೆ ದೇವರಿಗೆ ಹರಕೆ ಒಪ್ಪಿಸುವುದು, ಭಂಡಾರ ಹಾಕುವಂತಹ ಸಂಪ್ರದಾಯಗಳು ಶ್ರದ್ಧಾ ಭಕ್ತಿಯಿಂದ ನೆರವೇರಿದವು. ಮುಗುಟಗೇರಿ, ನಡಿಕೇರಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಂದ ಆಗಮಿಸಿದ್ದ ಭಕ್ತರು ದೇವರ ದರ್ಶನ ಪಡೆದು ಪುನೀತರಾದರು. ಮಹಿಳೆಯರು, ಯುವಕರು ಹಾಗೂ ಹಿರಿಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಉತ್ಸವದ ಯಶಸ್ಸಿಗೆ ಕಾರಣರಾದರು. ಉತ್ಸವದ ಸಂದರ್ಭದಲ್ಲಿ ದೇವಸ್ಥಾನ ಆಡಳಿತ ಮಂಡಳಿ ವತಿಯಿಂದ ಭಕ್ತರಿಗೆ ಅನ್ನಸಂತರ್ಪಣೆ ಮಾಡಲಾಯಿತು.