ಗೋಣಿಕೊಪ್ಪಲು, ಮೇ ೪: ೫ ದಿನಗಳ ಕಾಲ ನಡೆದ ಯರವ ಸಮಾಜದ ೧೩ನೇ ವರ್ಷದ ಉಳಕುಚ್ಚುಲಾತ್ಲೇರಂಡ ಕ್ರಿಕೆಟ್ ಕಪ್ ೨೦೨೬ ತೆರೆ ಕಂಡಿತು. ತಿತಿಮತಿ ಸರ್ಕಾರಿ ಪ್ರೌಢಶಾಲಾ ಮೈದಾನದಲ್ಲಿ ೬೦ ಯರವ ಸಮುದಾಯದ ತಂಡಗಳು ಉತ್ತಮ ಪ್ರದರ್ಶನ ನೀಡಿದವು. ಅಂತಿಮ ಪಂದ್ಯದಲ್ಲಿ ಮಲ್ಲೂರು ಕ್ರಿಕೆರ‍್ಸ್ ತಂಡವು ಡ್ರೀಮ್ ಬಾಯ್ಸ್ ತಂಡವನ್ನು ಮಣಿಸುವ ಮೂಲಕ ಈ ಬಾರಿಯ ಉಳಕುಚ್ಚುಲಾತ್ಲೇರಂಡ ಕ್ರಿಕೆಟ್ ಕಪ್‌ನ್ನು ಮುಡಿಗೇರಿಸಿಕೊಂಡಿತು. ಡ್ರೀಮ್ ಬಾಯ್ಸ್ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.

ಕ್ರೀಡೋತ್ಸವದ ಅಂಗವಾಗಿ ಮಹಿಳೆಯರಿಗೆ ಮೊದಲ ಬಾರಿಗೆ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಲಾಗಿತ್ತು. ೮ ತಂಡಗಳು ಭಾಗವಹಿಸಿದ್ದವು. ರೆಡ್ ರೋಜಸ್ ತಂಡವು ಪ್ರಥಮ ಬಹುಮಾನ ಪಡೆಯಿತು. ದ್ವಿತೀಯ ಬಹುಮಾನವನ್ನು ವಾರಿಯರ್ಸ್ ವುಮೆನ್ ತಂಡ ತನ್ನದಾಗಿಸಿಕೊಂಡಿತು. ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಉತ್ತಮ ಸಾಧನೆ ಮಾಡಿದ ಸಮಾಜದ ವಿದ್ದಾರ್ಥಿಗಳನ್ನು ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಸಮಾಜದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಅಂತಿಮ ಪಂದ್ಯಾಟವನ್ನು ಉದ್ಘಾಟಿಸಿ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಶಾಸಕ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್.ಪೊನ್ನಣ್ಣ ಮಾತನಾಡಿ, ಗಿರಿಜನರಿಗಾಗಿ ಸಮುದಾಯ ಭವನ ನಿರ್ಮಾಣ ಮಾಡುವ ಕಾರ್ಯಕ್ಕೆ ಕೈ ಜೋಡಿಸುತ್ತೇನೆ. ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡುವ ಬಹುದೊಡ್ಡ ಜವಾಬ್ದಾರಿ ಪೋಷಕರ ಮೇಲಿದೆ ಎಂದರು.

ಮುಖ್ಯ ಅತಿಥಿಗಳಾಗಿದ್ದ ಕರ್ನಾಟಕ ಸರ್ಕಾರದ ಚೀಫ್ ಎಲೆಕ್ಟಿçಕಲ್ ಇನ್ಸ್ಪೆಕ್ಟರ್ ತೀತಿರ ಎನ್.ಅಪ್ಪಚ್ಚು ಬಹುಮಾನ ವಿತರಿಸಿ ಮಾತನಾಡಿ ಯರವ ಸಮುದಾಯವು ಕೊಡಗಿನಲ್ಲಿ ತನ್ನದೆ ಆದ ಕಲೆ ಸಂಸ್ಕೃತಿಯನ್ನು ಹೊಂದಿರುವ ಸಮುದಾಯವಾಗಿದೆ. ಇತರ ಸಮುದಾಯಗಳೊಂದಿಗೆ ಉತ್ತಮವಾಗಿ ಒಡನಾಟವನ್ನು ಹೊಂದಿದವರಾಗಿದ್ದಾರೆ ಎಂದರು.

ಯರವ ಸಮಾಜದ ಅಧ್ಯಕ್ಷ ಪಿ.ಕೆ.ಸಿದ್ದಪ್ಪ ಅಧ್ಯಕ್ಷತೆ ವಹಿಸಿ ಪ್ರಾಸ್ತವಿಕವಾಗಿ ಮಾತನಾಡಿ ೧೩ ವರ್ಷಗಳ ಹಿಂದೆ ಸಣ್ಣದಾಗಿ ಆರಂಭಿಸಿದ ಕ್ರೀಡೋತ್ಸವು ಇಂದು ಯಶಸ್ವಿಯಾಗಿ ಮುನ್ನಡೆಯುತ್ತಿದೆ. ಈ ನಾಡಿನ ದಾನಿಗಳ ಸಹಕಾರವೇ ಕ್ರೀಡೋತ್ಸವವು ಯಶಸ್ವಿಗೆ ಮೂಲ ಕಾರಣವಾಗಿದ್ದು, ಮುಂದಿನ ಸಾಲಿನಿಂದ ಸರ್ಕಾರ ಯರವ ಸಮುದಾಯದ ಕ್ರೀಡೋತ್ಸವಕ್ಕೆ ಅನುದಾನ ಬಿಡುಗಡೆ ಮಾಡುವಂತೆ ಮನವಿ ಮಾಡಿದರು.

ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಕೊಡಗು ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ ತಿತಿಮತಿ ಗಿರಿಜನ ವಿವಿಧೊದ್ದೇಶ ಸಹಕಾರ ಸಂಘದ ಅಧ್ಯಕ್ಷ ಮಣಿಕುಂಞ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಪಿ.ಆರ್. ಪಂಕಜ, ತಿತಿಮತಿ ಗಿರಿಜನ ವಿವಿಧೋದ್ದೇಶ ಸಹಕಾರ ಸಂಘದ ಉಪಾಧ್ಯಕ್ಷೆ ಪುಷ್ಪ, ಸದಸ್ಯರಾದ ಮಲ್ಲಪ್ಪ, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮಿದೇರಿರ ನವೀನ್, ಗೋಣಿಕೊಪ್ಪ ಗ್ರಾ.ಪಂ. ಮಾಜಿ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ ಐಟಿಡಿಪಿ ಇಲಾಖೆಯ ಪಿ.ಸಿ.ಕಾಶಿ, ಸಮಾಜ ಸೇವಕಿ ಪುಷ್ಪಜ, ಯರವ ಸಮಾಜದ ಗುರುಗಳಾದ ಮಣಿ, ವೀರಾಜಪೇಟೆ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಜಾನ್ಸನ್, ಗಿರಿಜನ ಮುಖಂಡ ಅಪ್ಪಾಜಿ ಉಪಸ್ಥಿತರಿದ್ದರು. ಗೌರವ ಅಧ್ಯಕ್ಷ ರವಿ ಪ್ರಾರ್ಥಿಸಿ, ಯರವ ಸಮಾಜದ ಮಾಜಿ ಕಾರ್ಯದರ್ಶಿ ಸಂಜೀವ ಸ್ವಾಗತಿಸಿ, ಸದಸ್ಯರಾದ ಪ್ರತಿಮಾ, ಅಗ್ನಿಹರ್ಷ ಕಾರ್ಯಕ್ರಮ ನಿರೂಪಿಸಿ, ನಿತಿನ್ ವಂದಿಸಿದರು. ಮುಖ್ಯ ಅತಿಥಿಗಳನ್ನು ಯರವ ಸಾಂಪ್ರದಾಯಿಕ ದುಡಿಕೊಟ್ಟಿನೊಂದಿಗೆ ಮೆರವಣಿಗೆಯಲ್ಲಿ ವೇದಿಕೆಗೆ ಕರೆತರಲಾಯಿತು. - ಹೆಚ್.ಕೆ. ಜಗದೀಶ್