ಗೋಣಿಕೊಪ್ಪಲು, ಮೇ ೩: ಹಾತೂರು ಶಾಲಾ ಮೈದಾನದಲ್ಲಿ ಕೊಡಗು ಹೆಗ್ಗಡೆ ವಿದ್ಯಾಭಿವೃದ್ದಿ ಸಂಘ ಹಾಗೂ ಸಮಾಜದ ವತಿಯಿಂದ ಕಳೆದ ೩ ದಿನಗಳ ಕಾಲ ನಡೆದ ೨೬ನೇ ವರ್ಷದ ಕ್ರೀಡೋತ್ಸವಕ್ಕೆ ವರ್ಣರಂಜಿತ ತೆರೆ ಎಳೆಯಲಾಯಿತು. ಕ್ರೀಡೋತ್ಸವದಲ್ಲಿ ಕ್ರಿಕೆಟ್, ಥ್ರೋಬಾಲ್ ಹಾಗೂ ಹಗ್ಗಾಜಗ್ಗಾಟ ಸೇರಿದಂತೆ ಇತರೆ ಕ್ರೀಡೆಗಳು ನಡೆದವು.

ಹಿರಿಯರ ವಿಭಾಗದ ಅಂತಿಮ ಕ್ರಿಕೆಟ್ ಪಂದ್ಯಾವಳಿಯು ಕಳೆದ ಬಾರಿಯ ಚಾಂಪಿಯನ್ ಹಾಲುಗುಂದ ತಂಡ ಹಾಗೂ ಹಾತೂರು ತಂಡಗಳ ನಡುವೆ ನಡೆಯಿತು. ಟಾಸ್ ಗೆದ್ದ ಹಾತೂರು ತಂಡವು ಮೊದಲಿಗೆ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಹಾಲುಗುಂದ ತಂಡವು ಬ್ಯಾಟಿಂಗ್ ಆರಂಭಿಸಿತು. ಎದುರಾಳಿ ಹಾತೂರು ತಂಡದ ಬಿಗಿ ಬೌಲಿಂಗ್ ಎದುರಿಸುವಲ್ಲಿ ಆರಂಭದಲ್ಲಿಯೇ ವಿಫಲಗೊಂಡ ಹಾಲುಗುಂದ ತಂಡವು ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಇನ್ನೂ ಒಂದು ಓವರ್ ಬಾಕಿ ಇರುವಂತೆಯೇ ತನ್ನೆಲ್ಲ ವಿಕೆಟ್ ಕಳೆದುಕೊಂಡು ೫೬ ರನ್‌ಗಳಿಸಿತು.

ಬ್ಯಾಟಿಂಗ್ ಆರಂಭಿಸಿದ ಹಾತೂರು ತಂಡ ನಿಧಾನಗತಿಯ ಆಟ ಆರಂಭಿಸಿ ರನ್‌ಗಳನ್ನು ಕಲೆ ಹಾಕುವತ್ತ ಯಶಸ್ವಿಯಾಯಿತು. ೧.೪ ಓವರ್ ಬಾಕಿ ಇರುಂತೆಯೇ ಎದುರಾಳಿ ತಂಡದ ೫೭ ರನ್ ಗುರಿ ಮುಟ್ಟುವ ಮೂಲಕ ಈ ಬಾರಿಯ ಹೆಗ್ಗಡೆ ಸಮಾಜದ ೨೬ ನೇ ವರ್ಷದ ಚಾಂಪಿಯನ್ ಆಗಿ ಗೆಲುವಿನ ನಗೆ ಬೀರಿತು. ಕಳೆದ ಬಾರಿಯ ಚಾಂಪಿಯನ್ ಹಾಲುಗುಂದ ತಂಡ ಸೋಲನ್ನು ಅನುಭವಿಸಿ, ರನ್ನರ್ ಅಪ್ ಪ್ರಶಸ್ತಿಗೆ ಭಾಜನವಾಯಿತು. ವಿಜೇತ ತಂಡಕ್ಕೆ ಗಣ್ಯರು ನಗದು ಬಹುಮಾನ ಸೇರಿದಂತೆ ಪಾರಿತೋಷಕ ವಿತರಿಸಿದರು.

ಜೂನಿಯರ್ ಕ್ರಿಕೆಟ್

ಕಿರಿಯರಿಗಾಗಿ ಏರ್ಪಡಿಸಿದ್ದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಒಟ್ಟು ೬ ತಂಡಗಳು ಭಾಗವಹಿಸಿದ್ದವು. ಅಂತಿಮ ಪಂದ್ಯವು ಪೊನ್ನಂಪೇಟೆ ಹಾಗೂ ಬಿಟ್ಟಂಗಾಲ ತಂಡದ ನಡುವೆ ನಡೆಯಿತು. ರೋಚಕ ಪಂದ್ಯದಲ್ಲಿ ಪೊನ್ನಂಪೇಟೆ ತಂಡ ಗೆಲುವು ಸಾಧಿಸಿ ಈ ಬಾರಿಯ ಕಿರಿಯರ ವಿಭಾಗದ ಚಾಂಪಿಯನ್ ಆಗಿ ಹೊರಹೊಮ್ಮಿತು. ಬಿಟ್ಟಂಗಾಲ ತಂಡವು ರನ್ನರ್ ಅಪ್ ಪ್ರಶಸ್ತಿ ಪಡೆಯಿತು. ವಿಜೇತ ತಂಡಕ್ಕೆ ನಗದು ಬಹುಮಾನ ಸೇರಿದಂತೆ ಪಾರಿತೋಷಕ ನೀಡಲಾಯಿತು.

ಮಹಿಳೆಯರ ಥ್ರೋಬಾಲ್

ಮಹಿಳೆಯರಿಗಾಗಿ ಏರ್ಪಡಿಸಿದ್ದ ಥ್ರೋಬಾಲ್ ಪಂದ್ಯಾವಳಿಯಲ್ಲಿ ಪಾರಣೆ ತಂಡ ಗೆಲುವು ಸಾಧಿಸಿತು. ರನ್ನರ್ ಅಪ್ ಪ್ರಶಸ್ತಿಯನ್ನು ಕುಶಾಲನಗರ ತಂಡ ತನ್ನದಾಗಿಸಿಕೊಂಡಿತು. ಪಂದ್ಯಾವಳಿಯ ತೀರ್ಪುಗಾರರಾಗಿ ದೈಹಿಕ ಶಿಕ್ಷಣ ಶಿಕ್ಷಕರುಗಳಾದ ಮೂಕಳೇರ ಮೀರಾ ಅಶೋಕ್ ಹಾಗೂ ಟಿ.ವಿ.ಸುರೇಶ್ ಕಾರ್ಯನಿರ್ವಹಿಸಿದರು.

ಸನ್ಮಾನ

ಕ್ರೀಡೋತ್ಸವ ಅಂಗವಾಗಿ ಸಮಾಜದಲ್ಲಿ ವಿವಿಧ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಕೃಷಿ ಇಲಾಖೆಯ ರಾಜ್ಯ ಪ್ರಶಸ್ತಿಗೆ ಭಾಜನರಾದ ಹಾಲುಗುಂದ ಗ್ರಾಮದ ಕೃಷಿಕ ಪಂದಿಕAಡ ಜಯ ಬೋಪಣ್ಣ, ಕಿಗ್ಗಾಲು ಗ್ರಾಮದ ಕೃಷಿಕ ಪಡಿಞರಂಡ ವೇಣುಕುಮಾರ್, ರಾಷ್ಟಿçÃಯ ವೆಟ್ರನ್ ಅಥ್ಲೆಟಿಕ್‌ನಲ್ಲಿ ಸಾಧನೆ ಮಾಡಿದ ಮೂರೀರ ಶಾಂತಿ ಬೆಳ್ಯಪ್ಪ, ಅಚ್ಚಪಂಡ ಟೀನಾ ಸೋಮಣ್ಣ ಇವರುಗಳು ಸನ್ಮಾನಕ್ಕೆ ಭಾಜನರಾದರು.

ಹಗ್ಗಜಗ್ಗಾಟ

ಮಹಿಳೆಯರಿಗಾಗಿ ಆಯೋಜನೆಗೊಂಡಿದ್ದ ಹಗ್ಗಜಗ್ಗಾಟ ಪಂದ್ಯಾವಳಿಯಲ್ಲಿ ಹಾತೂರು ಮಹಿಳಾ ತಂಡವು ಗೆ ಪ್ರಥಮ ಬಹುಮಾನ ಪಡೆಯಿತು. ಹಾಲುಗುಂದ ಮಹಿಳಾ ತಂಡವು ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.

ಪುರುಷರ ಹಗ್ಗಜಗ್ಗಾಟ

ಪುರುಷರಿಗಾಗಿ ಏರ್ಪಡಿಸಿದ್ದ ಹಗ್ಗಜಗ್ಗಾಟದಲ್ಲಿ ಹಾತೂರು ತಂಡ ಪ್ರಥಮ ಸ್ಥಾನ ಪಡೆಯಿತು. ಹಾಲುಗುಂದ ತಂಡವು ದ್ವಿತೀಯ ಸ್ಥಾನ ಪಡೆಯಿತು. ತೀರ್ಪುಗಾರರಾಗಿ ಟಿ.ವಿ.ಸುರೇಶ್, ಪಟ್ಟು ಪಳಂಗಪ್ಪ, ಪಂದಿಕAಡ ದಿನೇಶ್ ಕುಶ ಕಾರ್ಯನಿರ್ವಹಿಸಿದರು

ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಸಮಾಜದ ಅಧ್ಯಕ್ಷ ಕೊರಕುಟ್ಟಿರ ಸರ ಚಂಗಪ್ಪ ಮಾತನಾಡಿ, ಸಮಾಜ ಬಾಂಧವರು ವಿವಿಧ ಕ್ಷೇತ್ರಗಳಲ್ಲಿ ಮತ್ತಷ್ಟು ಉತ್ತಮ ಸಾಧನೆ ಮಾಡಬೇಕು,ಆ ಮೂಲಕ ಉತ್ಸಾಹಿ ಯುವಕ, ಯುವತಿಯರಿಗೆ ಮಾರ್ಗದರ್ಶನ ನೀಡಬೇಕು ಎಂದು ಕರೆ ನೀಡಿದರು.

ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಪೊಲೀಸ್ ಇಲಾಖೆಯ ಸರ್ಕಲ್ ಇನ್ಸ್ಪೆಕ್ಟರ್ ತುದಿಮಾಡ ಸವಿ ಲೋಕೇಶ್ ಮಾತನಾಡಿ, ಸಮಾಜದವರು ವಾರ್ಷಿಕವಾಗಿ ಕ್ರೀಡೋತ್ಸವದ ಮೂಲಕ ಒಂದೆಡೆ ಸೇರುವುದು ಆಶಾದಾಯಕ ಬೆಳೆವಣಿಗೆಯಾಗಿದ್ದು, ಮುಂದೆಯೂ ಸಮಾಜದ ಒಗ್ಗಟ್ಟು ಮುಂದುವರಿಯಲಿ ಎಂದು ಆಶಿಸಿದರು.

ಸಮಾಜದ ನಿಕಟಪೂರ್ವ ಅಧ್ಯಕ್ಷ, ವಕೀಲರಾದ ಪಡಿಞರಂಡ ಜಿ.ಅಯ್ಯಪ್ಪ ಮಾತನಾಡಿ ಸಮಾಜವನ್ನು ಕಟ್ಟುವಲ್ಲಿ ಕಳೆದ ೪೦ ವರ್ಷಗಳಿಂದ ದುಡಿದಿದ್ದೇವೆ. ಸಮಾಜವು ಇಂದು ಹೆಮ್ಮರವಾಗಿ ಬೆಳೆದು ನಿಂತಿದೆ. ಸಮಾಜವನ್ನು ಮುನ್ನಡೆಸುವ ಜವಾಬ್ದಾರಿ ಮುಂದಿನ ಯುವ ಪೀಳಿಗೆಯ ಕೈಯಲ್ಲಿದೆ ಎಂದರು.

ವೇದಿಕೆಯಲ್ಲಿ ಟ್ರೋಫಿ ದಾನಿಗಳಾದ ನಿವೃತ್ತ ಸಬ್ ಇನ್ಸ್ಪೆಕ್ಟರ್ ಕೊಂಗೆಪAಡ ಮಾಚಯ್ಯ, ಸಮಾಜದ ಉಪಾಧ್ಯಕ್ಷ ಚರ್ಮಂಡ ಪೂವಯ್ಯ, ಖಜಾಂಚಿ ಕೋರಂಡ ಪ್ರಕಾಶ್ ನಾಣಯ್ಯ, ನಿರ್ದೇಶಕರುಗಳಾದ ಕೊಂಗೆಪAಡ ರಘು, ತೋರೆರ ಮುದ್ದಯ್ಯ, ಪಾಣಿಕುಟ್ಟಿರ ಕುಟ್ಟಪ್ಪ, ಕೊಪ್ಪಡ ಪಟ್ಟು ಪಳಂಗಪ್ಪ, ತೋರೆರ ರಾಜ ಪೂವಯ್ಯ ಸೇರಿದಂತೆ ಸಮಾಜದ ಪದಾಧಿಕಾರಿಗಳು, ನಿರ್ದೇಶಕರುಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು. ಕ್ರೀಡಾ ಸಂಚಾಲಕ ಪಂದಿಕAಡ ನಾಗೇಶ್ ನಿರೂಪಿಸಿ, ಕಾರ್ಯದರ್ಶಿ ಪಡಿಞರಂಡ ಪ್ರಭುಕುಮಾರ್ ಸ್ವಾಗತಿಸಿ, ವಂದಿಸಿದರು. ಪಂದ್ಯಾವಳಿಯ ತೀರ್ಪುಗಾರರಾಗಿ ಗಣೇಶ್, ಓಸೀನ್ ತಾಂತ್ರಿಕ ವಿಭಾಗದಲ್ಲಿ ಸಾಗರ್ ಪೂವಣ್ಣ, ಚರ್ಮಂಡ ಹರ್ಷ ಹಾಗೂ ತೋರೆರ ಉಮೇಶ್ ಕಾರ್ಯನಿರ್ವಹಿಸಿದರು. ಕೊಂಗೆಪAಡ ಯಶಿಕ ರಮೇಶ್ ನಡೆಸಿಕೊಟ್ಟ ಭರತನಾಟ್ಯ ಕಾರ್ಯಕ್ರಮ ಗಮನ ಸೆಳೆಯಿತು. ಸಮಾಜದ ವತಿಯಿಂದ ಎಸ್‌ಎಸ್‌ಎಲ್‌ಸಿ, ಪಿಯುಸಿ, ಪದವಿ ಶಿಕ್ಷಣದಲ್ಲಿ ಅತ್ಯುತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

- ಹೆಚ್.ಕೆ. ಜಗದೀಶ್