ಮಡಿಕೇರಿ, ಮೇ ೭: ಬಾಳೆಲೆ ವ್ಯಾಪ್ತಿಯಲ್ಲಿ ಬಸ್ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದ್ದು, ಇದರಿಂದ ಇಲ್ಲಿನ ಪ್ರಯಾಣಿಕರು ಪರದಾಡುವ ಸ್ಥಿತಿ ಸೃಷ್ಟಿಯಾಗಿದೆ.
ಬಾಳೆಲೆ, ನಿಟ್ಟೂರು ಕಾರ್ಮಾಡು, ಪೊನ್ನಪ್ಪಸಂತೆ, ಮಾಯಮುಡಿ ಗ್ರಾಮಗಳಿಗೆ ಮಡಿಕೇರಿ ರಾಜ್ಯ ರಸ್ತೆ ಸಾರಿಗೆ ಘಟಕದ ಮಾರ್ಗ ಸಂಖ್ಯೆ ೭೯/೮೦ರ ಬಸ್ ಸಂಚಾರಿ ವ್ಯವಸ್ಥೆಯು ಬೆಳಿಗ್ಗೆ ಮತ್ತು ಸಂಜೆ ಇದ್ದು ಈ ಮಾರ್ಗವನ್ನು ಚಾಲಕರಿಲ್ಲ, ನಿರ್ವಾಕರಿಲ್ಲ, ಬಸ್ ತಾಂತ್ರಿಕವಾಗಿ ಸರಿ ಇಲ್ಲವೆಂಬ ಕಾರಣಗಳನ್ನು ನೀಡಿ ಪ್ರತಿ ನಿತ್ಯ ಮಾರ್ಗದಲ್ಲಿ ಸಂಚರಿಸದೆ ವಾರಕ್ಕೆ ಒಂದೆರಡು ದಿನ ಮಾತ್ರ ಸಂಚರಿಸುವುದರಿAದ ಈ ಭಾಗದ ಜನತೆಗೆ ಸಾರಿಗೆ ಸೌಲಭ್ಯ ಸರಿಯಾಗಿ ಸಮರ್ಪಕವಾಗಿ ಸಿಗುತ್ತಿಲ್ಲ ಎಂಬ ದೂರು ವ್ಯಕ್ತವಾಗಿದೆ.
ಬಾಳೆಲೆಯಿಂದ ಮೈಸೂರಿಗೆ ಇದ್ದ ಈ ನೇರ ಬಸ್ ಸಂಪರ್ಕವನ್ನು ಇತ್ತೀಚೆಗೆ ಗೊಣಿಕೊಪ್ಪಲುವಿನಿಂದ ಮೈಸೂರಿಗೆ ತೆರಳುವ ಬದಲಾಗಿ ಗೊಣಿಕೊಪ್ಪದಿಂದ ಅಮ್ಮತ್ತಿ ಮೂರ್ನಾಡು ಮಡಿಕೇರಿಗೆ ಬದಲಾಯಿಸಿರುವುದರಿಂದ ಬಾಳೆಲೆಯಿಂದ ಮೈಸೂರಿಗೆ ಇದ್ದ ಒಂದೇ ಒಂದು ಬಸ್ ಸೌಲಭ್ಯ ಕೂಡ ಕಡಿತಗೊಂಡಿದೆ. ಗೋಣಿಕೊಪ್ಪದಿಂದ ಮೈಸೂರಿಗೆ ಗಂಟೆಗಟ್ಟಲೆ ಕಾದರೂ ಬಸ್ ಸಿಗುತ್ತಿಲ್ಲ ಇದರಿಂದಾಗಿ ಹಿರಿಯ ನಾಗರಿಕರೂ ಸೇರಿದಂತೆ ಬಾಳೆಲೆ ಮಾಯಮುಡಿ ಭಾಗದ ಪ್ರಯಾಣಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬಸ್ ಪ್ರತಿದಿನ ಸಂಚರಿಸುವ ವ್ಯವಸ್ಥೆ ಮಾಡಿ ಬಾಳೆಲೆಯಿಂದ ಮೈಸೂರಿಗೆ ನೇರ ಸಂಪರ್ಕ ಕಲ್ಪಿಸಲು ಈ ಭಾಗದ ಜನರು ಒತ್ತಾಯಿಸಿದ್ದಾರೆ.