ಮಡಿಕೇರಿ, ಮೇ ೮: ಕೊಡಗು ಜಿಲ್ಲೆಯಲ್ಲಿ ಮಿತಿ ಮೀರಿರುವ ವನ್ಯಜೀವಿಗಳ ಉಪಟಳ ಹಾಗೂ ಸಿ ಮತ್ತು ಡಿ ಭೂಮಿಯ ಸಮಸ್ಯೆಯ ಕುರಿತು ಅರಣ್ಯ ಸಚಿವರ ಗಮನ ಸೆಳೆಯಲು ಗುಡ್ಡೆಹೊಸೂರು ವೃತ್ತದಲ್ಲಿ ನಿಂತಿದ್ದ ಬಿಜೆಪಿ ಪ್ರಮುಖರನ್ನು ಪೊಲೀಸರು ವಶಕ್ಕೆ ಪಡೆದಿರುವ ಕ್ರಮ ಖಂಡನೀಯವೆAದು ಸೋಮವಾರಪೇಟೆ ಬಿಜೆಪಿ ಮಂಡಲದ ವಕ್ತಾರ ಬಲ್ಲಾರಂಡ ಕಂಠಿ ಕಾರ್ಯಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಜಿಲ್ಲೆಯಲ್ಲಿ ವನ್ಯಜೀವಿ ದಾಳಿ ಮತ್ತು ಭೂಮಿ ಸಮಸ್ಯೆ ಜನರ ನಿದ್ದೆಗೆಡಿಸಿದೆ. ತಲೆತಲಾಂತರಗಳಿAದ ಕೃಷಿ ಮಾಡಿಕೊಂಡು ಬಂದಿರುವ ರೈತರು ಭೂಮಿ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ವನ್ಯಜೀವಿಗಳ ದಾಳಿಯಿಂದ ಅಮಾಯಕ ಮಾನವ ಜೀವಗಳು ಹಾಗೂ ಜಾನುವಾರುಗಳು ಬಲಿಯಾಗುತ್ತಿವೆ. ಪರಿಸ್ಥಿತಿ ಗಂಭೀರವಾಗಿದ್ದರೂ ಮತ್ತು ನಿರಂತರ ಪ್ರತಿಭಟನೆಗಳು ನಡೆಯುತ್ತಿದ್ದರೂ ಅರಣ್ಯ ಇಲಾಖೆ ಯಾವುದೇ ಸ್ಪಂದನೆಯನ್ನು ನೀಡುತ್ತಿಲ್ಲ.

ಈ ಕಾರಣದಿಂದ ಅರಣ್ಯ ಸಚಿವರನ್ನು ಖುದ್ದಾಗಿ ಭೇಟಿಯಾಗಿ ಜಿಲ್ಲೆಯನ್ನು ಕಾಡುತ್ತಿರುವ ಅರಣ್ಯ ಇಲಾಖೆ ವ್ಯಾಪ್ತಿಯ ಸಮಸ್ಯೆಗಳನ್ನು ಗುಡ್ಡೆಹೊಸೂರಿನಲ್ಲಿ ವಿವರಿಸುವ ಪ್ರಯತ್ನವನ್ನು ಸೋಮವಾರಪೇಟೆ ಬಿಜೆಪಿ ಮಾಡಿತ್ತು. ಆದರೆ ಸಚಿವರು ಆಗಮಿಸುವ ಮೊದಲೇ ಪೊಲೀಸರು ಬಿಜೆಪಿ ಪ್ರಮುಖರನ್ನು ಹಾಗೂ ಕಾರ್ಯಕರ್ತರನ್ನು ವಶಕ್ಕೆ ಪಡೆದು ಮಡಿಕೇರಿಗೆ ಕರೆ ತಂದಿರುವುದು ಖಂಡನೀಯವೆAದು ತಿಳಿಸಿದ್ದಾರೆ.