ಪೊನ್ನಂಪೇಟೆ, ಮೇ ೮: ದಕ್ಷಿಣ ಕೊಡಗಿನಲ್ಲಿ ಜಾನುವಾರುಗಳ ಮೇಲೆ ಹುಲಿ ದಾಳಿ ಮುಂದುವರೆದಿದ್ದು, ಹಾಡಹಗಲಿನಲ್ಲೇ ಪೊನ್ನಂಪೇಟೆ ತಾಲೂಕಿನ ಬೆಳ್ಳೂರು ಗ್ರಾಮದ ರೈತ ಇಟ್ಟೀರ ಪೊನ್ನಣ್ಣ ಎಂಬವರ ಹಸು ಹುಲಿ ದಾಳಿಗೆ ಬಲಿಯಾಗಿದೆ. ಇದುವರೆಗೆ, ಈ ಹಸು ಸೇರಿ ಪೊನ್ನಣ್ಣ ಅವರ ೧೦ನೇ ಹಸು ಹುಲಿ ದಾಳಿಗೆ ಬಲಿಯಾಗಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ನಿರಂತರ ಹುಲಿ ದಾಳಿಯಿಂದ ಆಕ್ರೋಶಗೊಂಡಿರುವ ಗ್ರಾಮಸ್ಥರು ಹಾಗೂ ರೈತರು ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕೆಂದು ಆಗ್ರಹಿಸಿ ಬೆಳ್ಳೂರು ಜಂಕ್ಷನ್‌ನಲ್ಲಿ ಕೆಲ ನಿಮಿಷ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ಬೆಳೆಗಾರ ಚೆಟ್ಟಂಗಡ ಕಂಬ ಕಾರ್ಯಪ್ಪ, ಬೆಳ್ಳೂರು ಗ್ರಾಮದಲ್ಲಿ ಕಳೆದ ಕೆಲವು ವರ್ಷಗಳಲ್ಲಿ ಸುಮಾರು ೧೦ ಕ್ಕೂ ಹೆಚ್ಚು ಜಾನುವಾರುಗಳು ಹುಲಿ ದಾಳಿಗೆ ಬಲಿಯಾಗಿವೆ. ಅರಣ್ಯ ಇಲಾಖೆ ಹುಲಿಯನ್ನು ಸೆರೆ ಹಿಡಿಯುವ ಯಾವುದೇ ಕಾರ್ಯಾಚರಣೆ ಕೈಗೊಂಡಿಲ್ಲ. ಒಬ್ಬ ರೈತನ ಹತ್ತು ಹಸುಗಳು ಬಲಿಯಾಗಿರುವುದು ಇಲಾಖೆಯ ನಿರ್ಲಕ್ಷö್ಯಕ್ಕೆ ಹಿಡಿದ ಕೈಗನ್ನಡಿ ಎಂದು ಕಿಡಿಕಾರಿದರು.
ಬಲ್ಯಮೀದೇರಿರ ಪ್ರಕಾಶ್ ಮಾತನಾಡಿ, ಅರಣ್ಯ ಇಲಾಖೆ ಕಾರ್ಯಾಚರಣೆಯ ಹೆಸರಿನಲ್ಲಿ ರೈತರ ಕಣ್ಣಿಗೆ ಮಣ್ಣೆರಚುವ ಕೆಲಸ ಮಾಡುತ್ತಿದೆ. ವನ್ಯಜೀವಿಗಳ ಹಾವಳಿಯಿಂದ ಸಾಕು ಪ್ರಾಣಿಗಳನ್ನು ಕಳೆದುಕೊಂಡ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಪರಿಸ್ಥಿತಿಗೆ ಅರಣ್ಯ ಇಲಾಖೆಯ ನಿರ್ಲಕ್ಷö್ಯ ಕಾರಣ ಎಂದು ಅರಣ್ಯ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
ಇದುವರೆಗೆ ಹುಲಿ ದಾಳಿಗೆ ಬಲಿಯಾದ ಕೆಲವೇ ಜಾನುವಾರುಗಳಿಗೆ ಮಾತ್ರ ಪರಿಹಾರ ನೀಡಲಾಗಿದೆ ಎಂದು ಆರೋಪಿಸಿದ ಅವರು, ಹಣದ ಪರಿಹಾರ ನೀಡುವುದಕ್ಕಿಂತ ಒಂದು ಜಾನುವಾರು ಬಲಿಯಾದರೆ ಅದಕ್ಕೆ ಬದಲಾಗಿ ಮತ್ತೊಂದು ಜಾನುವಾರನ್ನೇ ಪರಿಹಾರವಾಗಿ ನೀಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಬಲ್ಯಮೀದೇರಿರ ಪ್ರಕಾಶ್, ಚೆಟ್ಟಂಗಡ ಕಂಬ ಕಾರ್ಯಪ್ಪ, ಇಟ್ಟೀರ ಪೊನ್ನಣ್ಣ, ಮಲ್ಲಂಗಡ ಧಿವಿನ್, ಚಂಗುಲAಡ ಸೂರಜ್, ನೂರೆರ ಬನ್ಸಿ, ಅಜ್ಜಮಾಡ ಚಿಮ್ಮ, ಬಾಳೆರ ಸಚಿನ್, ಬಾಚರಣಿಯಂಡ ರಂಜಿ, ಮಾಣಿರ ವಿಜಯ್, ಬಾಳೆರ ರಮೇಶ್, ಮಲ್ಲೇಂಗಡ ಶರಣು, ಕೈಬುಲೀರ ಬೆಳ್ಳಿಯಪ್ಪ, ನೂರೆರ ಜೀವನ್, ನೂರೆರ ಅರುಣ್, ಕೇಚಮಾಡ ವಿಷು ತಮ್ಮಯ್ಯ, ಚೀಯಣಮಾಡ ಸಂಜು, ರೈತ ಮುಖಂಡರಾದ ಬಲ್ಯಮೀದೇರಿರ ಕವಿತಾ, ಚೊಟ್ಟೆಕಾಳಪಂಡ ಮನು ಸೇರಿದಂತೆ ರೈತ ಸಂಘದ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು. ಅರಣ್ಯ ಇಲಾಖೆ ಸಿಬ್ಬಂದಿಗಳು ಹುಲಿಯ ಹೆಜ್ಜೆ ಗುರುತು ಅನುಸರಿಸಿ ಕೂಂಬಿAಗ್ ನಡೆಸಿದ್ದು, ಹುಲಿ ಗುರುತು ಪತ್ತೆಗೆ ಕ್ಯಾಮರಾ ಅಳವಡಿಸಿದ್ದಾರೆ. ತಾ. ೯ ರಂದು (ಇಂದು) ಕೂಂಬಿAಗ್ ಮುಂದುವರೆಸುವುದಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಎಸಿಎಫ್ ಮಂಜುನಾಥ್, ಆರ್‌ಎಫ್‌ಓ ಗಂಗಾಧರ್, ಡಿ ಆರ್‌ಎಫ್‌ಓ ಸಂದೇಶ್, ಅರಣ್ಯ ಪಾಲಕರು, ಆರ್‌ಆರ್‌ಟಿ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.