ಮಡಿಕೇರಿ, ಮೇ. ೮: ಮಡಿಕೇರಿಯ ಕಾವೇರಿ ಹಾಲ್ ನಲ್ಲಿ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಹಾಗೂ ಕೊಡಗು ಬ್ಯಾರೀಸ್ ವೆಲ್ಫೇರ್ ಟ್ರಸ್ಟ್ ವತಿಯಿಂದ ನಡೆದ ಕೊಡಗು ಜಿಲ್ಲಾ ಮೊದಲನೇ ಬ್ಯಾರಿ ಸಾಹಿತ್ಯ ಸಮ್ಮೇಳನದ ಮುಖ್ಯ ಆಕರ್ಷಣೆಯಾಗಿದ್ದು ಬ್ಯಾರಿ ಕವಿಗೋಷ್ಠಿ. ಬ್ಯಾರಿ ಭಾಷೆಯಲ್ಲಿ ನಡೆದ ಈ ಕವಿಗೋಷ್ಠಿಯಲ್ಲಿ ಅಬ್ದುಲ್ಲಾ ಮಡಿಕೇರಿಯವರ “ನಿಕ್ಕು ತಟ್ಟದಿಕ್ಕಲೆ ಆಲ್ಮಾರ ಶಾಪ” ಎಂಬ ಕವಿತೆ ಟ್ರಂಪ್ ನ ಹುಚ್ಚಾಟವನ್ನು ಅಣಕ ಮಾಡಿದ್ದಾರೆ. ಆತ ಸಣ್ಣ ಸಣ್ಣ ಮಕ್ಕಳ ಹತ್ಯೆ ಮಾಡಿದ ಬಗ್ಗೆ ಖಂಡಿಸಿ ಎಪ್ಸ್ಟಿನ್ ಫೈಲ್ಸ್ ನ ಬಗ್ಗೆ ವಿವರವಾಗಿ ತಿಳಿಸಿ ಟ್ರಂಪ್, ನೆತನ್ಯಾಹು ಮಾಡುತ್ತಿರುವ ರಂಪಾಟದ ಬಗ್ಗೆ ಕವಿತೆ ಮುಖಾಂತರ ತಿಳಿಸಿದರು.

ಸ್. ಐ. ಮುನೀರ್ ಅಹಮದ್ ಅವರ ಕವನ ಗಾಳಿಪಟಹಾರಾಟದ ರೀತಿ ವಿವರಿಸಿ ಹಾರಾಡುವ ಜನರು ಗಾಳಿಪಟದಂತೆ ಕೆಳಗೆ ಇಳಿಯಲೇ ಬೇಕು ಎಂಬ ಅರ್ಥ ವ್ಯಕ್ತಪಡಿಸಿದ ಕವನ ನೆರೆದಿದ್ದ ಕಾವ್ಯ ರಸಿಕರ ಮನ ಕಲಕಿತು.

ಕವಯಿತ್ರಿ ರಷ್ಮಾ ನಾಸಿರ್ ಅವರ ಚೊಚ್ಚಲ “ಕಾಟ ಒರು ಪಿಕಲಾಟ” ಕವನದಲ್ಲಿ ಜನರು ಮನೆ ಮುಂದೆ ಗಿಡ ನೆಡುತ್ತಾರೆ, ಆದರೆ ಮನೆಯ ಕಸವನ್ನು ರಸ್ತೆಯ ಬದಿಗೆ ಹಾಕುತ್ತಾರೆ. ಹಾಗೆ ಹಾಕಬಾರದು. ಕಸದ ಗಾಡಿಗೆ ಹಾಕಬೇಕು, ಪ್ಲಾಸ್ಟಿಕ್ ಬಳಕೆ ಮಾಡಬಾರದು, ಪರಿಸರ ಸ್ವಚ್ಛವಾಗಿಡಬೇಕು ಎಂಬ ಸಂದೇಶ ಸಾರಿತು.

ಹಿರಿಯ ಕವಿ, ಪತ್ರಕರ್ತರಾದ ಎಂ. ಇ. ಮಹಮ್ಮದ್ ಅವರು “ಉಮ್ಮ” ಎಂಬ ಕವನದಲ್ಲಿ ಒಂಭತ್ತು ತಿಂಗಳ ನಂತರ ಹೆತ್ತ ಅಮ್ಮನ ಪ್ರೀತಿ-ಕರುಣೆಯ ಬಗ್ಗೆ ತಿಳಿಸಿದರು.

ಅಮ್ಮ ಸಾಕಿ ಸಲಹಿದ ಬಗ್ಗೆ ತಾಯಿಯು ಅನ್ನ, ನೀರು ಬಿಟ್ಟು ಸಾಕಿದ ಬಗ್ಗೆ ಹಾಗೂ ತಾಯಿಯ ಮಮತೆಯ ಬಗ್ಗೆ ತಿಳಿಸಿದರು. ಅಂತಹ ಅಮ್ಮ ಸಂತೋಷದಲ್ಲಿ ಇರಬೇಕು ಎಂದು ಹೇಳಿ ಅವಳಿಗೆ ದೀರ್ಘ ಆಯಸ್ಸು ನೀಡಬೇಕೆಂದು ಕವನದ ಮೂಲಕ ಪ್ರಾರ್ಥಿಸಿದರು.

ಕವಯಿತ್ರಿ ರಹಮತ್ ಅವರು “ಇನ್ಸಾನಿಯತ್” ಕವನದಲ್ಲಿ ತಂದೆ-ತಾಯಿಗಳನ್ನು ಅವರ ಇಳಿ ವಯಸ್ಸಿನಲ್ಲಿ ವೃದ್ಧಾಶ್ರಮದಲ್ಲಿ ಸೇರಿಸಿದ ಜನರ ಬಗ್ಗೆ ತಿಳಿಸಿ ಯುದ್ಧದಲ್ಲಿ ಏನು ತಿಳಿಯದ ಅಮಾಯಕ ಮಕ್ಕಳನ್ನು ಕೊಂದು ವಿಕೃತ ಸಂತೋಷ ಪಡುವ ಜನರನ್ನು ನೋಡಿ ಇನ್ಸಾನಿಯತ್ ಕೇಳುವ ಬಗ್ಗೆ ತಿಳಿಸಿ ಎಲ್ಲರೂ ಮಾನವೀಯತೆ ಮರೆಯಬಾರದು ಎಂಬ ಸಂದೇಶ ಅವರ ಕವನದಲ್ಲಿತ್ತು.

ಕವಯಿತ್ರಿ ಅಖಿಲಾ ಕಲೀಂ “ನಂಙಲೋ ಜೀವನ ಆಯಿತ್ ಸಾರ್ಥಕ” ಎಂಬ ಕವನದಲ್ಲಿ ಆಸೆಗಳನ್ನು ಮನಸ್ಸಿನಲ್ಲಿ ಇಟ್ಟು ಗಂಡನ ಮನೆಯಲ್ಲಿ ಒಳ್ಳೆಯ ಹೆಸರು ಪಡೆದುಕೊಳ್ಳಬೇಕು ಎಂಬ ಸಂದೇಶದ ಕವಿತೆ ವಾಚಿಸಿದರು.

ಕವಯಿತ್ರಿ ಫಾತಿಮಾ ರಿಫಾ “ ಮನಸುರೋ ಪಲಕ” ಕವನದಲ್ಲಿ ಪ್ರೀತಿಯಿಂದ ಆಗುವ ಉಪಯೋಗ ತಿಳಿಸಿ ಹಿಂದೆ ತಂದೆ ತಡವಾಗಿ ಬಂದರೆ ಎಲ್ಲರೂ ಸಹಿಸುತ್ತಿದ್ದರು. ಆದರೆ ಈಗ ಗಂಡ ತಡವಾಗಿ ಬಂದರೆ ಮನೆಯಲ್ಲಿ ಕದನ ನಡೆಯುತ್ತದೆ. ಹಿಂದೆ ತುತ್ತು ನೀಡುತ್ತಿದ್ದ ಅಮ್ಮ ಈಗ ಮಗನಲ್ಲಿ ತುತ್ತನ್ನು ಬೇಡುತ್ತಾಳೆ. ತಾಯಿಯ ಪ್ರೀತಿಯು ಈ ಕವನದಲ್ಲಿ ಚಿತ್ರಿತವಾಗಿದೆ.

ಮಂಗಳೂರಿನ ಯುವ ಕವಿ, ಹಾಡುಗಾರ ಅಶ್ರಫ್ ಅಪೋಲೊ ಅವರು “ಪಾಹಿದ” ಎಂಬ ಕವನವನ್ನು ರಾಗವಾಗಿ ಹಾಡಿದರು. ಹೊಟ್ಟೆ - ಬಟ್ಟೆ ಕಟ್ಟುವುದರಿಂದ ಯಾವುದೇ ಲಾಭವಿಲ್ಲ. ಎಂಬ ಸಂದೇಶ ಕವಿತೆಯಲ್ಲಿ ವ್ಯಕ್ತ ಗೊಂಡಿತು.

ಬ್ಯಾರಿ ವೆಲ್ಫೇರ್ ಟ್ರಸ್ಟ್ನ ಅಧ್ಯಕ್ಷ ಹಾಗೂ ಕವಿ ಎಂ. ಬಿ. ನಾಸಿರ್ ಅಹಮದ್ ಅವರು ಪ್ರಪಂಚದ ವಿವಿಧ ದೇಶಗಳಲ್ಲಿ ಯುದ್ಧ ನಡೆದು ಶಾಲಾ ಮಕ್ಕಳ ಮಾರಣ ಹೋಮ, ಹಾಗೂ ಸಾವಿರಾರು ಜನರು ಸತ್ತು ಅವರ ದೇಹದ ಬೆಳಕು ಹಾರಿ ಹೋದದ್ದು. ಅವರ ದೇಹದ ಬೆಳಕು ಮನೆಯ ಬೆಳಕು ಹಾರಿ ಹೋದ ಬಗ್ಗೆ “ಚಿಮಣಿ ಪೊಲಿಂಜತ್” ಕವನ ಜನರ ಮನಕಲಕಿತು.

ಕವಯಿತ್ರಿ ಜಾಹಿದಾ ಇಸ್ಮಾಯಿಲ್ ಅವರು “ನಂಡೋ ನೆನಪುಲು ಉಲ್ಲೊ ಉಮ್ಮ'' ಎಂಬ ಕವಿತೆ ಅಮ್ಮನ ನಗುವಿನ ಬಗ್ಗೆ ಅಮ್ಮನ ಚೆಲುವಿನ ಬಗ್ಗೆ, ಅಮ್ಮ ದುಃಖದಲ್ಲಿ ಸಂತೈಸುವ ಬಗ್ಗೆ ಅಂತಹ ಅಮ್ಮನನ್ನು ಚೆನ್ನಾಗಿ ನೋಡಿಕೊಳ್ಳ ಬೇಕೆಂಬ ಸಂದೇಶ ವ್ಯಕ್ತಪಡಿಸಿದರು. ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಇ. ಸುಲೇಮಾನ್ ಮಾಸ್ಟರ್ ವಹಿಸಿದರು. ಕನ್ನಡದ ಮೊದಲ ಬ್ಯಾರಿ ಕ್ಯಾಸೆಟ್ ಬಿ. ಎ. ಷಂಶುದ್ದೀನ್ ಅವರು ರಚಿಸಿದ ಗೀತೆಗಳನ್ನು ಒಳಗೊಂಡಿದೆ ಅದನ್ನು ದಿ. ಲಿಯಾಕತ್ ಅಲಿ ಸುಮಧುರವಾಗಿ ಹಾಡಿದ್ದಾರೆ. ಅದೇ ರೀತಿ ಪತ್ರಕರ್ತ, ಹಿರಿಯ ಬ್ಯಾರಿ ಕವಿ ಎಂ. ಇ. ಮಹಮ್ಮದ್, ಅಬ್ದುಲ್ಲಾ ಮಡಿಕೇರಿ ಹಾಗೂ ಮುನೀರ್ ಅಹ್ಮದ್, ಎಂ. ಬಿ. ನಾಸಿರ್ ಅಹಮ್ಮದ್ ಅವರು ಬ್ಯಾರಿ ಕವಿತೆ ಕೃಷಿಯಲ್ಲಿ ತೊಡಗಿದ್ದಾರೆ.

ವಿಶೇಷವಾಗಿ ರಷ್ಮಾ ನಾಸಿರ್, ರಹಮತ್, ಅಖಿಲಾ ಕಲೀಂ, ಫಾತಿಮಾ ರಿಫಾ, ಜಾಹಿದಾ ಇಸ್ಮಾಯಿಲ್ ಅವರ ಕವಿತೆಯ ವಿಶೇಷತೆಗಳನ್ನು ವಿವರಿಸಿದರು. ಬ್ಯಾರಿ ಸಾಹಿತ್ಯ ಅಕಾಡೆಮಿ ಈ ಎಲ್ಲಾ ಕವಿ-ಕವಯಿತ್ರಿಯರ ಕವನ ಸಂಕಲನಗಳನ್ನು ಪ್ರಕಟಿಸಿ ಬ್ಯಾರಿ ಭಾಷೆಯಲ್ಲಿ ಬರೆಯುವವರಿಗೆ ಪ್ರೋತ್ಸಾಹ ನೀಡಬೇಕು. ಬ್ಯಾರಿ ಸಾಹಿತ್ಯ ಸಂಸ್ಕೃತಿ, ಕಲೆ ಉಳಿಯಲು ಆಟ್ ಪಾಟ್ ಪಡಿಪು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕೆಂದು ತಿಳಿಸಿದರು. ತಮ್ಮ ಚೊಚ್ಚಲ ಬ್ಯಾರಿ ಕವನ ಸಂಕಲನ “ ನಾನ್ ಕಂಡ ಕಿನಾವು” ಕೃತಿಯ ಹಸ್ತ ಪ್ರತಿಯನ್ನು ಅಕಾಡೆಮಿಯ ಅಧ್ಯಕ್ಷರಿಗೆ ನೀಡಿದರು.

ವೇದಿಕೆಯಲ್ಲಿ ಸಮ್ಮೇಳನದ ಅಧ್ಯಕ್ಷ ಹಿರಿಯ ಕವಿ ಬಿ. ಎ. ಷಂಶುದ್ದೀನ್, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಉಮರ್ ಯು. ಹೆಚ್., ಬದ್ರಿಯಾ ಜಾಮಾಅತ್‌ನ ಅಧ್ಯಕ್ಷ ಅಮಿನ್ ಮೊಹಿಸಿನ್ ಉಪಸ್ಥಿತರಿದ್ದರು.

ಹಿರಿಯ ಬ್ಯಾರಿ ಕವಿ, ಕಾದಂಬರಿಕಾರ ಹಂಝ ಮಲಾರ್, ಬ್ಯಾರಿ ಭವನದ ಕಾರ್ಯದರ್ಶಿ ಅತ್ತೂರು ಚೆಯ್ಯಬ್ಬ, ಕ್ರೆಸೆಂಟ್ ಶಾಲೆಯ ಜಿ. ಹೆಚ್. ಮಹಮ್ಮದ್ ಹನೀಫ್, ಪುರಸಭೆಯ ನಿವೃತ್ತ ನೌಕರ ಉಮ್ಮರ್, ಬ್ಯಾರಿ ಅಕಾಡೆಮಿಯ ಸದಸ್ಯರಾದ ಬಿ. ಎಸ್. ಮಹಮ್ಮದ್, ಹಫ್ಸಾ ಬಾನು, ಸಾರಾ ಅಲಿ, ಶಮೀರಾ ಜಹಾನ್, ಖಾಲಿದ್ ಉಜಿರೆ, ತಾಜುದ್ದೀನ್ ಅಮ್ಮುಂಜೆ, ಅಬೂಬಕ್ಕರ್, ಶರೀಫ್, ಹಮೀದ್ ಹಸನ್, ಶಮೀರ್ ಮುಹಮ್ಮದ್ ಆಲಿ, ಅನ್ಸಾರ್, ಕರ್ನಾಟಕ ಕನಿಷ್ಟ ವೇತನ ಸಲಹಾ ಮಂಡಳಿ ಅಧ್ಯಕ್ಷ ಶಾಹಿದ್ ತೆಕ್ಕಿಲ್, ಬ್ಯಾರೀಸ್ ವೆಲ್ ಫೇರ್ ಟ್ರಸ್ಟ್ ನ ಎಂ. ಎ. ನಾಸಿರ್ ಅಹ್ಮದ್ ಮೊದಲಾದವರು ಉಪಸ್ಥಿತರಿದ್ದರು.

-ಇ. ಸುಲೇಮಾನ್