ಐಗೂರು, ಮೇ ೧೦: ಐಗೂರಿನಲ್ಲಿ ರೂ. ೧೦ ಕೋಟಿ ವೆಚ್ಚದ ನೂತನ ಸೇತುವೆ ಕಾಮಗಾರಿ ಕೆಲಸ ಆರಂಭವಾಗಿ ಆರು ತಿಂಗಳು ಕಳೆದಿದ್ದು, ಇದೀಗ ಕಾಮಗಾರಿ ಮಹತ್ವದ ಹಂತ ತಲುಪಿದೆ. ಸೇತುವೆಯ ತಳಭಾಗದ ಮೂರು ಪಿಲ್ಲರ್‌ಗಳ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು ವಾಹನ ಚಲಿಸುವ ಮೇಲ್ಭಾಗಕ್ಕೆ ಅಳವಡಿಸಲು ಸಿದ್ಧವಾಗಿರುವ ೧೬ ಟನ್ ತೂಕದ ೧೦ ಭೀಮ್‌ಗಳನ್ನು ಮೇಲೆರಿಸುವ ಕಾರ್ಯ ಸಾಗುತ್ತಿದೆ. ಇದಕ್ಕಾಗಿ ಗುಜರಾತಿನಿಂದ ಬೃಹತ್ ಕ್ರೇನ್ ತರಲಾಗಿದ್ದು, ಪಿಲ್ಲರ್‌ಗಳ ಮೇಲ್ಭಾಗಕ್ಕೆ ಭೀಮ್‌ಗಳನ್ನು ಅಳವಡಿಸುವ ಕೆಲಸ ಆರಂಭವಾಗಿದೆ. ಮಳೆಗಾಲ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಕಾಮಗಾರಿ ಸಮಯಕ್ಕೆ ಪೂರ್ಣಗೊಳ್ಳುವುದೋ ಎಂಬ ಆತಂಕ ಗ್ರಾಮಸ್ಥರಲ್ಲಿ ಮನೆ ಮಾಡಿತ್ತು. ಕೆಲ ದಿನಗಳ ಹಿಂದೆ ನಿಧಾನ ಗತಿಯಲ್ಲಿದ್ದ ಕಾಮಗಾರಿ ಈಗ ಚುರುಕುಗೊಂಡಿದೆ.