ಸೋಮವಾರಪೇಟೆ, ಮೇ ೧೧: ನಿವೇಶನ ರಹಿತ ಬಡವರಿಗೆ ನಿವೇಶನ ನೀಡುವಂತೆ ಒತ್ತಾಯಿಸಿ, ಕರ್ನಾಟಕ ಬಹುಜನ ಕಾರ್ಮಿಕ ಸಂಘಟನೆಯ ನೇತೃತ್ವದಲ್ಲಿ ಕುಂಬೂರು ಗ್ರಾಮದ ಪೈಸಾರಿ ಜಾಗದಲ್ಲಿ ವಸತಿರಹಿತ ಕಾರ್ಮಿಕರು ನಡೆಸುತ್ತಿರುವ ಅಹೋರಾತ್ರಿ ಧರಣಿ ೧೧ ನೇ ದಿನಕ್ಕೆ ಕಾಲಿಟ್ಟಿದೆ.
ಸೋಮವಾರವೂ ಜನಪ್ರತಿನಿಧಿಗಳು ಮತ್ತು ಜಿಲ್ಲಾಡಳಿತದ ಯಾವುದೇ ಅಧಿಕಾರಿಗಳು ಧರಣಿ ನಿರತರನ್ನು ಭೇಟಿ ಮಾಡಿ ಚರ್ಚಿಸಿಲ್ಲ. ಮಹಿಳಾ ಸಂಘಟನೆಗಳ ಪ್ರಮುಖರು ಧರಣಿ ಸ್ಥಳಕ್ಕೆ ಆಗಮಿಸಿ ಹೋರಾಟದ ಬಗ್ಗೆ ಮಾತನಾಡಿದರು. ಸಂಘಟನೆಯ ಅಧ್ಯಕ್ಷ ಕೆ. ಮೊಣ್ಣಪ್ಪ ಮಾತನಾಡಿ, ಕಳೆದ ೨೫ ವರ್ಷಗಳಿಂದಲೂ ಸೂರಿಗಾಗಿ ಶ್ರಮಿಕರು ಹೋರಾಟ ಮಾಡುತ್ತಿದ್ದಾರೆ. ಆದರೆ ನಿವೇಶನ ರಹಿತ ಬಡವರಿಗೆ ನಿವೇಶನ ನೀಡಿಲ್ಲ. ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡ ಉಳ್ಳವರಿಗೆ ಹಕ್ಕುಪತ್ರಗಳನ್ನು ನೀಡುತ್ತಿದ್ದಾರೆ. ಶಾಸಕ ಡಾ.ಮಂತರ್ಗೌಡ ಅವರಾದರೂ ಬಡವರಿಗೆ ನಿವೇಶನ ಕೊಡಿಸಲು ಪ್ರಯತ್ನಿಸುತ್ತಾರೆ ಎಂಬ ನಂಬಿಕೆಯಿತ್ತು. ಆದರೆ ೧೧ ದಿನ ಕಳೆದರೂ ಶಾಸಕರು ಧರಣಿ ಸ್ಥಳಕ್ಕೆ ಬಂದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಅಹೋರಾತ್ರಿ ಧರಣಿಯ ಬಗ್ಗೆ ಸಂಘಟನೆ ರಾಜ್ಯ ನಾಯಕರಿಗೆ ಮಾಹಿತಿ ನೀಡಿದ್ದೇವೆ. ಕಂದಾಯ ಮಂತ್ರಿ ಮತ್ತು ಕರ್ನಾಟಕ ಮುಖ್ಯ ಕಾರ್ಯದರ್ಶಿಗಳೊಂದಿಗೆ ನಾಯಕರು ಮಾತನಾಡಿದ್ದಾರೆ. ರಾಜ್ಯ ನಾಯಕರು ಧರಣಿ ಸ್ಥಳಕ್ಕೆ ಬಂದ ನಂತರ ಉಪವಾಸ ಸತ್ಯಾಗ್ರಹದ ಬಗ್ಗೆ ತೀರ್ಮಾನ ಮಾಡಲಿದ್ದೇವೆ. ನಮಗೂ ಬದುಕುವ ಹಕ್ಕಿದೆ. ಸಂವಿಧಾನ ಶ್ರಮಿಕರಿಗೂ ಸಮಾನ ಹಕ್ಕುಗಳನ್ನು ನೀಡಿದೆ ಎಂದು ಹೇಳಿದರು.ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಂದ ಯಾವುದೇ ಸ್ಪಂದನ ಸಿಗದ ಹಿನ್ನೆಲೆ ಧರಣಿಯನ್ನು ಮುಂದುವರೆಸುವ ತೀರ್ಮಾನ ಕೈಗೊಂಡಿದ್ದೇವೆ ಎಂದರು.