ಮಡಿಕೇರಿ, ಮೇ ೧೨: ಮಡಿಕೇರಿ ನಗರದಲ್ಲಿ ಅಮೃತ್-೨ ಕುಡಿಯುವ ನೀರಿನ ಯೋಜನೆ ಕಾಮಗಾರಿ ನಡೆಯುತ್ತಿದ್ದು, ಕೆಲಸ ಮಾಡುವವರು ಪ್ರಸ್ತುತ ನೀರು ಸರಬರಾಜಾಗುತ್ತಿರುವ ಪೈಪ್‌ಲೈನ್‌ಗಳಿಗೆ ಹಾನಿ ಮಾಡುತ್ತಿದ್ದು ಇದರಿಂದಾಗಿ ನಗರದ ಜನತೆಗೆ ಕುಡಿಯುವ ನೀರಿಗೆ ತೊಂದರೆ ಉಂಟಾಗುತ್ತಿರುವದಾಗಿ ನಗರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಅರುಣ್ ಶೆಟ್ಟಿ ಹೇಳಿದ್ದಾರೆ. ಅಮೃತ್ ೨ ಕಾಮಗಾರಿ ಕೈಗೊಳ್ಳುವ ವೇಳೆ ಕೆಲಸ ಮಾಡಿಸುತ್ತಿರುವ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯವರು ನಗರಸಭೆ ಸಿಬ್ಬಂದಿ, ಸದಸ್ಯರುಗಳ ಗಮನಕ್ಕೆ ತಾರದೆ ಯಂತ್ರಗಳ ಮೂಲಕ ಗುಂಡಿ ತೋಡುವದರಿಂದ ಮೂಲ ನೀರಿನ ಪೈಪ್‌ಗಳಿಗೆ ಹಾನಿಯಾಗುತ್ತಿವೆ. ತನ್ನ ವಾರ್ಡ್ನಲ್ಲಿ ಪೈಪ್ ಒಡೆದುಹೋಗಿ ಕಳೆದ ಮೂರು ದಿನಗಳಿಂದ ನೀರು ಸರಬರಾಜಾಗುತ್ತಿಲ್ಲ.

ಈ ಬಗ್ಗೆ ಮಂಡಳಿಯ ಅಧಿಕಾರಗಳಲ್ಲಿ ಪ್ರಶ್ನಿಸಿದರೆ ನಮ್ಮ ಮೇಲೆಯೇ ದೂರು ನೀಡುವದಾಗಿ ಬೆದರಿಸುತ್ತಾರೆ. ನಾವು ಜನತೆಯಲ್ಲಿ ಕ್ಷಮೆಯಾಚಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಜಿಲ್ಲಾಧಿಕಾರಿಗಳು ಈ ನಿಟ್ಟಿನಲ್ಲಿ ಗಮನ ಹರಿಸಿ ಸಮಸ್ಯೆ ಪರಿಹರಿಸಬೇಕು ಎಂದು ಮನವಿ ಮಾಡಿದ್ದಾರೆ.

ಮಂಡಳಿಯವರು ಸರಿಯಾದ ರೀತಿಯಲ್ಲಿ ಕೆಲಸ ನಿರ್ವಹಿಸದೇ ಇದ್ದಲ್ಲಿ, ಶೀಘ್ರದಲ್ಲಿ ಕಾಮಗಾರಿ ಪೂರ್ಣಗೊಳಿಸದಿದ್ದಲ್ಲಿ ಸಾರ್ವಜನಿಕರು, ಸಂಘ ಸಂಸ್ಥೆಗಳ ನೆರವಿನೊಂದಿಗೆ ಒಳಚರಂಡಿ ಮಂಡಳಿ ಕಚೇರಿಗೆ ಮುತ್ತಿಗೆ ಹಾಕುವದಾಗಿ ಅರುಣ್ ಶೆಟ್ಟಿ ಎಚ್ಚರಿಸಿದ್ದಾರೆ.