ಕಣಿವೆ, ಮೇ ೧೨: ಇಲ್ಲಿಗೆ ಸಮೀಪದ ಬಸವನಹಳ್ಳಿ ಗ್ರಾಮದ ಚಾಮುಂಡೇಶ್ವರಿ ದೇವರ ೫೩ನೇ ವಾರ್ಷಿಕ ಪೂಜೋತ್ಸವ ಮಂಗಳವಾರ ಶ್ರದ್ಧಾಭಕ್ತಿಯಿಂದ ನೆರವೇರಿತು. ಸೋಮವಾರ ಬೆಳಿಗ್ಗೆ ಶ್ರೀ ಗಣಪತಿ ಹಾಗೂ ಬಸವೇಶ್ವರ ದೇವರ ಕಲಶ ಪ್ರತಿಷ್ಠಾಪನೆ ಹಾಗೂ ಪೂಜೋತ್ಸವ ಜರುಗಿತು. ಮಂಗಳವಾರ ಗುಳಿಗಪ್ಪ ಮತ್ತು ಚಾಮುಂಡೇಶ್ವರಿ ದೇವರ ಪೂಜೆ ವಿಗ್ರಹ ಪ್ರತಿಷ್ಠಾಪನೆ ಬಳಿಕ ಬಗೆ ಬಗೆಯ ಪುಷ್ಪಗಳಿಂದ ಅಲಂಕರಿಸಿ ಮಹಾಮಂಗಳಾರತಿ ನೆರವೇರಿಸಲಾಯಿತು.
ಪುರೋಹಿತ ಪ್ರಕಾಶ್ ಭಟ್ ನೇತೃತ್ವದಲ್ಲಿ ಪೂಜಾ ವಿಧಿ ನೆರವೇರಿತು. ದೇವಸ್ಥಾನದ ಸಮಿತಿ ಅಧ್ಯಕ್ಷರೂ ಆದ ಸ್ಥಳ ದಾನಿ ಬಿ.ಸಿ. ಕಾಳಯ್ಯ, ಉಪಾಧ್ಯಕ್ಷ ಪಟ್ಟು ಮಾದಪ್ಪ, ಕಾರ್ಯದರ್ಶಿ ಮಧು ಸೇರಿದಂತೆ ಗ್ರಾಮಸ್ಥರು, ದೇವಾಲಯ ಸಮಿತಿಯವರು ಪಾಲ್ಗೊಂಡಿದ್ದರು. ವಿಶೇಷವಾಗಿ ಪೂಜಾ ಮಹೋತ್ಸವದಲ್ಲಿ ಭಾಗಿಯಾದ ಆದಿವಾಸಿ ಸಮುದಾಯದ ಮಹಿಳೆಯರು ಹಾಗೂ ಮಕ್ಕಳು ಕುಣಿದು ಕುಪ್ಪಳಿಸಿದರು. ದೇವತಾ ಮಹೋತ್ಸವದ ಅಂಗವಾಗಿ ದೇವಾಲಯದ ಆವರಣದಲ್ಲಿ ಜಾತ್ರೆ ಏರ್ಪಟ್ಟಿತ್ತು.