ವೀರಾಜಪೇಟೆ, ಮೇ ೧೩: ಕೊಡಗಿನಲ್ಲಿ ಅತಿಯಾದ ಭೂಪರಿವರ್ತನೆಯಿಂದ ಹಸಿರು ವನ್ಯ ಸಂಪತ್ತುಗಳು ಕಡಿಮೆಯಾಗಿ ಕಾವೇರಿ ನೀರಿನ ಹರಿವಿನ ಪ್ರಮಾಣ ಕುಸಿಯುತ್ತಿದೆ ಎಂದು ಕೊಡಗು ಮತ್ತು ಕಾವೇರಿ ಉಳಿಸಿ ಅಭಿಯಾನ ಹಾಗೂ ಪರಿಸರ ಮತ್ತು ಆರೋಗ್ಯ ಪ್ರತಿಷ್ಠಾನ ಮತ್ತು ಕೊಡಗು ವನ್ಯಜೀವಿ ಸಂಘ ಆತಂಕ ವ್ಯಕ್ತಪಡಿಸಿದೆ.
ಈ ಬಗ್ಗೆ ವೀರಾಜಪೇಟೆ ಪ್ರೆಸ್ ಕ್ಲಬ್ ನಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕರ್ನಲ್ ಸಿ.ಪಿ. ಮುತ್ತಣ್ಣ ಅವರು,ಕೊಡಗು ಜಿಲ್ಲೆಯಲ್ಲಿ ಈಗ ನಡೆಯುತ್ತಿರುವ ಭೂ ಪರಿವರ್ತನೆಯ ಪ್ರಮಾಣ ಹೆಚ್ಚಾದಲ್ಲಿ ಜಿಲ್ಲೆಯ ಪ್ರಮುಖ ನಗರಗಳು ಪ್ರಕೃತಿ ಸೊಬಗನ್ನು ಕಳೆದುಕೊಂಡು ಮಹಾನಗರಗಳಂತೆ ಆಗಲಿವೆ ಎಂದರು.ಕಾವೇರಿ ನೀರು ಮುಂದೆ ಬತ್ತಿ ಕೊಡಗಿನ ಜನರ ಆಂತರಿಕ ಬಳಕೆಗೆ ಸೀಮಿತವಾಗಿ ಇದನ್ನು ಅವಲಂಬಿತ ಜಿಲ್ಲೆಗಳು ಹಾಗೂ ಬೆಂಗಳೂರಿಗೆ ನೀರು ಮರೀಚಿಕೆಯಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು. ದೊಡ್ಡ ದೊಡ್ಡ ಬಡಾವಣೆಗಳ ನಿರ್ಮಾಣದಿಂದ ಕಾಡಾನೆ, ಹುಲಿಗಳು ಇವುಗಳ ಓಡಾಟಕ್ಕೆ ಅಡಚಣೆಯಾಗಿ ಪ್ರಾಣಿಗಳ ಕಾಟ ಪಟ್ಟಣ ಪ್ರದೇಶಕ್ಕೆ ಬರುವ ಸಾಧ್ಯತೆ ಇದೆ ಎಂದು ಅವರು ಹೇಳಿದರು. ಮಾಳೇಟಿರ ಶ್ರೀನಿವಾಸ್ ಅವರು ಮಾತನಾಡಿ,ದಕ್ಷಿಣ ಕೊಡಗು ಹಾಗೂ ಉತ್ತರ ಕೊಡಗಿನಲ್ಲಿ ಗದ್ದೆಗಳನ್ನು ಮುಚ್ಚಿ ವಸತಿ ಬಡಾವಣೆಗಳು ನಿರ್ಮಾಣಗೊಳ್ಳುತ್ತಿದ್ದು ಹಲವೆಡೆ ಕಾನೂನಿನ ಉಲ್ಲಂಘನೆಯಾಗಿದೆ ಎಂದರು.
ಮಾಳೇಟಿರ ಕಾಳಯ್ಯ ಅವರು ಮಾತನಾಡಿ, ಕೊಡಗಿನಲ್ಲಿ ಹೊರ ಜಿಲ್ಲೆ ಹಾಗೂ ಹೊರ ರಾಜ್ಯದವರು ಕಪ್ಪು ಹಣವನ್ನು ಪರಿವರ್ತಿಸಲು ಇಲ್ಲಿನ ನೆಲವನ್ನು ಖರೀದಿಸುತ್ತಿದ್ದಾರೆ, ಹೀಗೆ ಮುಂದುವರಿದಲ್ಲಿ ಜಿಲ್ಲೆ ಮರುಭೂಮಿ ಆಗುವುದರಲ್ಲಿ ಸಂದೇಶ ಇಲ್ಲ ಎಂದರು. ಗೋಷ್ಠಿಯಲ್ಲಿ ಮಾಳೇಟಿರ ನಂಜಪ್ಪ ಮೋದೂರಿನ ಶಿವಶಂಕರ್ ಉಪಸ್ಥಿತರಿದ್ದರು.