ಸೋಮವಾರಪೇಟೆ, ಮೇ ೧೩: ತಾಲೂಕಿನ ಕುಂಬೂರು ಗ್ರಾಮದಲ್ಲಿ ನಿವೇಶನಕ್ಕೆ ಆಗ್ರಹಿಸಿ ನಿವೇಶನ ರಹಿತರು ಕರ್ನಾಟಕ ಬಹುಜನ ಕಾರ್ಮಿಕ ಸಂಘಟನೆಯ ನೇತೃತ್ವದಲ್ಲಿ ನಡೆಸುತ್ತಿರುವ ಆಹೋರಾತ್ರಿ ಧರಣಿ ೧೩ನೇ ದಿನವೂ ಮುಂದುವರೆದಿದೆ.

ಇAದು ಸ್ಥಳಕ್ಕೆ ತಾಲೂಕು ತಹಶೀಲ್ದಾರ್ ಕೆ.ಕೆ. ಕೃಷ್ಣಮೂರ್ತಿ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಪರಮೇಶ್‌ಕುಮಾರ್ ಅವರುಗಳು ತೆರಳಿ ನಿವೇಶನ ರಹಿತರ ಮನವೊಲಿಸಲು ನಡೆಸಿದ ಯತ್ನ ಮತ್ತೆ ವಿಫಲವಾಗಿದ್ದು, ಬಡ ಮಂದಿ ಶೆಡ್‌ನಲ್ಲಿ ಧರಣಿ ಮುಂದುವರೆಸಿದ್ದಾರೆ.

ತಾಲೂಕು ತಹಶೀಲ್ದಾರ್ ಕೃಷ್ಣಮೂರ್ತಿ ಅವರು ಧರಣಿ ನಿರತರೊಂದಿಗೆ ಮಾತನಾಡಿ, ಮಹಿಳೆಯರು, ಗರ್ಭಿಣಿಯರು, ಬಾಣಂತಿಯರು, ಮಕ್ಕಳು, ವೃದ್ಧರು ಶೆಡ್‌ನಲ್ಲಿ ತಂಗುತ್ತಿರುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ತಮ್ಮ ಬೇಡಿಕೆಯನ್ನು ಈಡೇರಿಸಲು ಸರ್ಕಾರದ ಮಟ್ಟದಲ್ಲಿ ಪ್ರಯತ್ನ ನಡೆಸಲಾಗುವುದು. ತಾವುಗಳು ಧರಣಿಯಿಂದ ಹಿಂದೆ ಸರಿಯಬೇಕೆಂದು ಮನವಿ ಮಾಡಿದರು.

ತಮ್ಮ ಬೇಡಿಕೆಯ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗುವುದು. ಮುಂದಿನ ದಿನಗಳಲ್ಲಿ ಬೇಡಿಕೆ ಈಡೇರಿಸಲಾಗುವುದು. ತಾವುಗಳು ಶೆಡ್ ಹಾಕಿರುವ ಸ್ಥಳ ಊರುಗುಪ್ಪೆ ಪೈಸಾರಿಯಲ್ಲಿದೆ. ಈ ಸ್ಥಳವನ್ನು ನೀಡಲು ಆಗುವುದಿಲ್ಲ ಎಂದು ಕೃಷ್ಣಮೂರ್ತಿ ಹೇಳಿದರು.

ಈ ಸ್ಥಳ ಊರುಗುಪ್ಪೆ ಪೈಸಾರಿಯಾಗಿದ್ದರೂ ಈ ಹಿಂದೆ ನಾಲ್ಕೆöÊದು ಮಂದಿಗೆ ಹೇಗೆ ದಾಖಲಾತಿ ಮಾಡಿಕೊಡಲಾಗಿದೆ? ಬಡವರು ಸೂರಿಗಾಗಿ ಶೆಡ್ ನಿರ್ಮಿಸಿದರೆ ತೆರವು ಮಾಡಲು ಬರುವ ಅಧಿಕಾರಿಗಳು, ಭೂ ಮಾಲೀಕರು ಒತ್ತುವರಿ ಮಾಡಿಕೊಂಡ ಸ್ಥಳಕ್ಕೆ ದಾಖಲೆ ಕೊಡುತ್ತಾರೆ ಎಂದು ಧರಣಿ ನಿರತರು ಅಸಮಾಧಾನ ವ್ಯಕ್ತಪಡಿಸಿದರು.

ಈ ಸಂದರ್ಭ ಸಂಘಟನೆಯ ಅಧ್ಯಕ್ಷ ಕೆ.ಮೊಣ್ಣಪ್ಪ ಮಾತನಾಡಿ, ಕಳೆದ ೨೦೧೪ರಲ್ಲಿಯೇ ತಾಲೂಕು ಪಂಚಾಯಿತಿಯಿAದ ತಾಲೂಕು ವ್ಯಾಪ್ತಿಯಲ್ಲಿ ೬೫೦೦ ಮಂದಿ ನಿವೇಶನ ರಹಿತರು ಇರುವ ಬಗ್ಗೆ ಪಟ್ಟಿ ಸಿದ್ಧಮಾಡಲಾಗಿದೆ. ೧೬ ವರ್ಷ ಕಳೆದರೂ ಸಹ ನಿವೇಶನ ರಹಿತರಿಂದ ಅರ್ಜಿ ಸ್ವೀಕರಿಸಿಲ್ಲ. ಸರ್ಕಾರಕ್ಕೆ ಮಾಹಿತಿಯನ್ನೂ ನೀಡಿಲ್ಲ. ಸಂಘಟನೆಯ ಸಮೀಕ್ಷೆ ಪ್ರಕಾರ ತಾಲೂಕಿನಲ್ಲಿ ೩೦ ಸಾವಿರಕ್ಕೂ ಅಧಿಕ ನಿವೇಶನ ರಹಿತ ಕುಟುಂಬಗಳಿವೆ. ಅಧಿಕಾರಿಗಳಿಗೆ ನಂಬಿಕೆ ಇಲ್ಲದಿದ್ದರೆ ನಮ್ಮೊಂದಿಗೆ ತೋಟದ ಲೈನ್ ಮನೆಗಳಿಗೆ ಬರಲಿ ಎಂದರು.

ಗ್ರಾಮ ಪಂಚಾಯಿತಿಗಳಲ್ಲಿ ನಡೆಯುವ ವಾರ್ಡ್ ಸಭೆ, ಗ್ರಾಮ ಸಭೆಗಳಲ್ಲಿ ನಿವೇಶನ ರಹಿತರ ಎಷ್ಟು ಅರ್ಜಿ ಸ್ವೀಕರಿಸಲಾಗಿದೆ. ಭೂಮಿಯ ಬೇಡಿಕೆಯ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆಯೇ? ಎಂದು ಅಧಿಕಾರಿಗಳನ್ನು ಪ್ರಶ್ನಿಸಿದ ಮೊಣ್ಣಪ್ಪ ಅವರು, ಬಾಲಸುಬ್ರಮಣ್ಯ ವರದಿ ಪ್ರಕಾರ ಕೊಡಗಿನಲ್ಲಿ ೧೪ ಸಾವಿರ ಹೆಕ್ಟೇರ್ ಪೈಸಾರಿ ಭೂಮಿಯಿದೆ. ಇದನ್ನು ಪ್ರತಿ ಗ್ರಾ.ಪಂ.ಗಳಿಗೆ ೫೦ ಏಕರೆಯಂತೆ ನಿವೇಶನ ರಹಿತರ ನಿವೇಶನಕ್ಕಾಗಿ ಮೀಸಲಿಡಬೇಕು. ಜಿಲ್ಲಾಧಿಕಾರಿಗಳು ವರದಿ ಸಿದ್ಧಪಡಿಸಬೇಕು. ಶಾಸಕರು ವಿಧಾನ ಸಭೆಯಲ್ಲಿ ಪ್ರಸ್ತಾಪಿಸಿ ಅನುಮೋದನೆ ಪಡೆದರೆ ಸಮಸ್ಯೆ ಬಗೆಹರಿಯುತ್ತದೆ. ಇದನ್ನು ಹೊರತುಪಡಿಸಿ ಹೋರಾಟದಿಂದ ಹಿಂದೆ ಸರಿಯುವಂತೆ ಮನವೊಲಿಸಲು ಬಂದರೆ ಸಮಸ್ಯೆ ಬಗೆಹರಿಯುವುದಿಲ್ಲ ಎಂದು ಹೇಳಿದರು. ಜನರ ಸಮಸ್ಯೆ ಬಗೆಹರಿಸಲು ಜಿಲ್ಲಾಧಿಕಾರಿಗಳು, ಶಾಸಕರು ಬರಬೇಕು. ಕೆಳ ಹಂತದ ಅಧಿಕಾರಿಗಳಿಂದ ಇದು ಬಗೆಹರಿಯುವುದಿಲ್ಲ ಎಂದು ಮೊಣ್ಣಪ್ಪ ಹೇಳಿದರು. ತರಾತುರಿಯಲ್ಲಿ ಧರಣಿ ನಡೆಸಿ ನಿವೇಶನ ನೀಡಿ ಎಂದು ಆಗುವುದಿಲ್ಲ. ಅದಕ್ಕೂ ಸಮಯ ಬೇಕಾಗುತ್ತದೆ ಎಂದು ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಹೇಳಿದರು.

ಸ್ವಾತಂತ್ರö್ಯ ಲಭಿಸಿ ೭ ದಶಕಗಳಾದರೂ ನಿವೇಶನ ರಹಿತರಿಗೆ ನಿವೇಶನ ನೀಡಿಲ್ಲ. ಆದರೆ ಭೂ ಮಾಲೀಕರು ಒತ್ತುವರಿ ಮಾಡಿಕೊಂಡಿರುವ ಜಾಗವನ್ನು ಸರ್ಕಾರ ಗುತ್ತಿಗೆ ನೀಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಮೊಣ್ಣಪ್ಪ, ಗರಗಂದೂರು ಗ್ರಾಮದ ಸ.ನಂ. ೪೦/೧ರಲ್ಲಿ ೪೬ ಏಕರೆ ಪೈಸಾರಿ ಜಾಗವಿದ್ದು, ೧೬.೧೧.೨೦೨೫ರಲ್ಲಿ ತಹಶೀಲ್ದಾರ್‌ರು, ಡಿ.ಸಿ., ಎ.ಸಿ. ಅವರೊಂದಿಗೆ ಸಭೆ ನಡೆಸಿ ಆರ್‌ಟಿಸಿಯ ೯/೬ ಕಾಲಂನಲ್ಲಿ ಪೈಸಾರಿ ಎಂದು ನಮೂದಾಗಿರುವ ಬಗ್ಗೆ ಅಧಿಕೃತ ಮಾಹಿತಿ ನೀಡಿದ್ದಾರೆ. ಇದರೊಂದಿಗೆ ೧೨ ಸೆಂಟ್ ಜಾಗವನ್ನು ಮಿನಿ ಆರೋಗ್ಯ ಕೇಂದ್ರ ಸ್ಥಾಪನೆಗೆ ನಿವೇಶನಕ್ಕೆ ನೀಡಬಹುದು ಎಂದು ವರದಿ ಕೊಟ್ಟಿದ್ದಾರೆ. ಉಳಿಕೆಯಾಗಿರುವ ಜಾಗದ ಸರ್ವೆ ಮಾಡಿ ನಿವೇಶನ ರಹಿತರಿಗೆ ವಿತರಿಸಿ ಎಂದು ಆಗ್ರಹಿಸಿದರು. ಈ ಬಗ್ಗೆ ಅಂತಿಮ ತೀರ್ಮಾನ ಆಗುವವರೆಗೂ ಧರಣಿ ಹಿಂಪಡೆಯುವುದಿಲ್ಲ. ಈಗಿರುವ ಜಾಗ ಅರಣ್ಯವೇ ಆದರೂ ಸರಿ, ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎಂದು ಪಟ್ಟು ಹಿಡಿದರು. ಅಂತಿಮವಾಗಿ ತಹಶೀಲ್ದಾರ್ ಹಾಗೂ ತಾ.ಪಂ. ಕಾರ್ಯನಿರ್ವಹಣಾಧಿಕಾರಿಗಳಿಗೆ ಮನವಿ ಪತ್ರ ನೀಡಿ, ಧರಣಿಯನ್ನು ಮುಂದುವರೆಸಲಾಯಿತು. ಈ ಸಂದರ್ಭ ಮಾದಾಪುರ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ರವಿ ನಾಯರ್ ಇದ್ದರು.