ಚೆಯ್ಯಂಡಾಣೆ, ಮೇ. ೧೩: ಮನೆಯ ಸಮೀಪದ ತೋಟದಲ್ಲಿದ್ದ ಹೂ ಗಿಡವನ್ನು ಕಡಿಯುತ್ತಿದ್ದ ಮಾಜಿ ಸೈನಿಕರೊಬ್ಬರ ಮೇಲೆ ಕಾಡಾನೆ ದಾಳಿ ಮಾಡಿದ ಪರಿಣಾಮ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಮಂಗಳವಾರ ಸಂಜೆ ಕೊಕೇರಿಯಲ್ಲಿ ಸಂಭವಿಸಿದೆ.
ನರಿಯAದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಕೇರಿ ಗ್ರಾಮದ ಕೆ.ಎಸ್.ಗೋಪಾಲ ಕೃಷ್ಣ (೬೫) ಗಾಯಗೊಂಡ ಮಾಜಿ ಸೈನಿಕರಾಗಿದ್ದಾರೆ.
ಗೋಪಾಲ ಕೃಷ್ಣ ಅವರು ಸಂಜೆ ೫ ಗಂಟೆ ವೇಳೆಗೆ ತೋಟಕ್ಕೆ ತೆರಳಿ ಹೂ ಗಿಡವನ್ನು ಕಡಿಯುತ್ತಿದ್ದ ಸಂದರ್ಭ ಒಂಟಿ ಸಲಗ ಇವರನ್ನು ಬೆನ್ನಟ್ಟಿ ಮೇಲೆ ದಾಳಿ ಮಾಡಿದೆ. ದಾಳಿಯಿಂದಾಗಿ ಕೈ, ಸೊಂಟ, ಬೆನ್ನಿಗೆ ಗಾಯವಾಗಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ತಕ್ಷಣ ಗ್ರಾಮಸ್ಥರಿಗೆ ವಿಷಯ ತಿಳಿಸಿದ ಹಿನ್ನೆಯಲ್ಲಿ ಕೂಡಲೇ ಖಾಸಗಿ ವಾಹನದ ಮೂಲಕ ಅವರನ್ನು ವೀರಾಜಪೇಟೆ ಸರ್ಕಾರಿ ಆಸ್ಪತ್ರೆಗೆ ಕರೆತಂದಿದ್ದಾರೆ. ವಿಚಾರ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆ ಅಧಿಕಾರಿಗಳಾದ ಆರ್‌ಎಫ್‌ಓ ಶಿವರಾಂ, ಡಿಆರ್ ಎಫ್‌ಓ ಶ್ರೀನಿವಾಸ್ ಹಾಗೂ ಸಿಬ್ಬಂದಿ ಆಸ್ಪತ್ರೆಗೆ ಭೇಟಿ ನೀಡಿ ಅರೋಗ್ಯ ವಿಚಾರಿಸಿದರು.
ಪ್ರತಿಭಟನೆಯ ಎಚ್ಚರಿಕೆ
ಈ ವ್ಯಾಪ್ತಿಯಲ್ಲಿ ಕಾಡಾನೆ ಹಾವಳಿ ಮಿತಿಮೀರಿದ್ದು ಕಳೆದ ವರ್ಷ ಚೇಲಾವರ ಗ್ರಾಮದ ಮಹಿಳೆ ಮನೆಯ ಸಮೀಪ ಹೂ ಕೀಳುತ್ತಿದ್ದ ಸಂದರ್ಭ ಕಾಡಾನೆ ದಾಳಿ ಮಾಡಿದ್ದು ಆ ನೆನಪು ಮಾಸುವ ಮುನ್ನವೇ ಮತ್ತೆ ಅಂತಹ ಘಟನೆ ಮರುಕಳಿಸಿದೆ. ಪ್ರಾಣ ಹಾನಿ ಸಂಭವಿಸುವ ಮುನ್ನ ಇಲಾಖೆ ಎಚ್ಚೆತ್ತು ಕೊಳ್ಳುವಂತೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ.
ಕೂಡಲೇ ಕಾಡಾನೆಯನ್ನು ಸೆರೆ ಹಿಡಿದು ಬೇರೆಡೆಗೆ ಸ್ಥಳಾಂತರಿಸಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಗ್ರಾಮಸ್ಥರು,ಸಂಘ ಸಂಸ್ಥೆಗಳೆಲ್ಲ ಒಟ್ಟು ಸೇರಿ ಅರಣ್ಯ ಇಲಾಖೆಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಗುವುದು ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದರು.
-ಅಶ್ರಫ್