ಮಡಿಕೇರಿ, ಮೇ ೧೪: ಕೊಡವ ಭಾಷಿಕ ಸಮುದಾಯಗಳ ಕೂಟದ ಆಶ್ರಯದಲ್ಲಿ ೨೧ ಜನಾಂಗದ ಕ್ರೀಡಾಕೂಟ ತಾ. ೧೫ ರಿಂದ (ಇಂದಿನಿAದ) ಮೂರು ದಿನಗಳ ಕಾಲ ಮೂರ್ನಾಡಿನ ಬಾಚೇಟ್ಟಿರ ಲಾಲು ಮುದ್ದಯ್ಯ ಮೈದಾನದಲ್ಲಿ ನಡೆಯಲಿದೆ.

ಬೆಳಿಗ್ಗೆ ೯.೩೦ ಗಂಟೆಗೆ ಕ್ರೀಡಾಕೂಟದ ಉದ್ಘಾಟನೆಯನ್ನು ೨೧ ಕೊಡವ ಭಾಷಿಕ ಜನಾಂಗದ ಸಮಾಜದ ಅಧ್ಯಕ್ಷರುಗಳು ನೆರವೇರಿಸಲಿದ್ದು, ಅಧ್ಯಕ್ಷತೆಯನ್ನು ಕೂಟದ ಅಧ್ಯಕ್ಷ ಡಾ. ಮೇಚಿರ ಸುಭಾಷ್ ನಾಣಯ್ಯ ವಹಿಸಲಿದ್ದಾರೆ. ನಂತರ ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಕೊಡವ ಭಾಷಿಕ ಸಮುದಾಯಗಳ ಕೂಟದ ನಡುವೆ ಪ್ರದರ್ಶನ ಕ್ರಿಕೆಟ್ ಪಂದ್ಯಾಟ ನಡೆಯಲಿದ್ದು, ಬಳಿಕ ಜನಾಂಗೀಯ ಕ್ರಿಕೆಟ್ ಪಂದ್ಯಾಟ ಆರಂಭಗೊಳ್ಳಲಿದೆ. ಭಾಷಿಕ ಜನಾಂಗದ ಮಧ್ಯೆ ಹಗ್ಗಜಗ್ಗಾಟ ಸ್ಪರ್ಧೆಯು ನಡೆಯಲಿದೆ ಎಂದು ಕೂಟದ ಕಾರ್ಯದರ್ಶಿ ಕೂಡಂಡ ಸಾಬ ಸುಬ್ರಮಣಿ ತಿಳಿಸಿದ್ದಾರೆ.

ಕೊಡವ ಭಾಷಿಕ ಸಮುದಾಯಗಳ ಕೂಟದ ಕ್ರೀಡಾಕೂಟದ ಲೋಗೋವನ್ನು ವೀರಾಜಪೇಟೆ ಶಾಸಕ ಹಾಗೂ ಮುಖ್ಯಮಂತ್ರಿ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಬಿಡುಗಡೆಗೊಳಿಸಿ ಕ್ರೀಡಾಕೂಟಕ್ಕೆ ಶುಭಹಾರೈಸಿದರು. ಈ ಸಂದರ್ಭ ಕೂಟದ ಅಧ್ಯಕ್ಷ ಸುಭಾಷ್ ನಾಣಯ್ಯ, ನಿರ್ದೇಶಕರುಗಳು, ಜನಾಂಗದ ಪ್ರಮುಖರು ಉಪಸ್ಥಿತರಿದ್ದರು.