ಮಡಿಕೇರಿ, ಮೇ ೧೬: ಕೊಡಗು ಜಿಲ್ಲಾ ಕುಲಾಲ ಕುಂಬಾರ ಸಂಘದ ವತಿಯಿಂದ ಜಿಲ್ಲಾ ಯುವ ಘಟಕ ಮತ್ತು ಜಿಲ್ಲಾ ಮಹಿಳಾ ಘಟಕದ ಸಹಯೋಗದೊಂದಿಗೆ ಕ್ರೀಡೋತ್ಸವ “ಸಮ್ಮಿಲನ''ಕ್ಕೆ ಚಾಲನೆ ನೀಡಲಾಯಿತು.

ಬೆಳಿಗ್ಗೆ ನಗರ ಓಂಕಾರೇಶ್ವರ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಿ ಬಳಿಕ ಮ್ಯಾನ್ಸ್ ಕಾಂಪೌAಡ್‌ನ ಕೆಳಗಿನ ಮೈದಾನಕ್ಕೆ ಕ್ರೀಡಾ ಜ್ಯೋತಿಯನ್ನು ಕೊಂಡೊಯ್ಯಲಾಯಿತು.

ಬಳಿಕ ಮೈದಾನದಲ್ಲಿ ಸಂಘದ ಹಿರಿಯ ಸದಸ್ಯರಾದ ರಾಮಶೆಟ್ಟಿ ಕುಶಾಲನಗರ ಹಾಗೂ ಚಿನ್ನಪ್ಪ ಬೆಂಗಳೂರು ಇವರುಗಳು ಕಾರ್ಯಕ್ರಮ ಉದ್ಘಾಟಿಸಿದರು. ವೇದಿಕೆಯಲ್ಲಿ ಸಂಘದ ಅಧ್ಯಕ್ಷ ಕೆ.ಕೆ. ದಾಮೋದರ್, ಸ್ಥಾಪಕ ಅಧ್ಯಕ್ಷರಾದ ಮುತ್ತಮ್ಮ ಕೋಟಿ, ಜಿಲ್ಲಾ ಮಡಿಕೆ ತಯಾರಿಕರ ಸಂಘದ ಅಧ್ಯಕ್ಷ ಎಂ.ಡಿ. ನಾಣಯ್ಯ ಮತ್ತಿತರರಿದ್ದರು. ಬಳಿಕ ಕ್ರಿಕೆಟ್ ಪಂದ್ಯಾಟಕ್ಕೆ ಚಾಲನೆ ನೀಡಲಾಯಿತು.

ಇದೇ ವೇಳೆ ಕಾರ್ಯಕ್ರಮಕ್ಕೆ ಆಗಮಿಸಿದ ವೀರಾಜಪೇಟೆ ಶಾಸಕರು, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್. ಪೊನ್ನಣ್ಣ ಅವರಿಗೆ ಕುಲಾಲ ಕುಂಬಾರ ಸಂಘದ ವತಿಯಿಂದ ವಿವಿಧ ಬೇಡಿಕೆಗಳನ್ನು ಒಳಗೊಂಡ ಮನವಿ ಸಲ್ಲಿಸಲಾಯಿತು. ಮನವಿ ಸ್ವೀಕರಿಸಿ ಮಾತನಾಡಿದ ಪೊನ್ನಣ್ಣ ಅವರು ಮನವಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸುವುದಾಗಿ ಭರವಸೆ ನೀಡಿದರು. ರಾಜ್ಯ ಕುಂಬಾರ ನಿಗಮದ ಅಧ್ಯಕ್ಷ ಡಾ. ಶ್ರೀನಿವಾಸ್ ವೇಲು ಮಾತನಾಡಿ, ಕ್ರೀಡಾಕೂಟಕ್ಕೆ ಶುಭ ಹಾರೈಸಿದರು.

ಕುಂಬಾರ ಕುಲಾಲ ಸಂಘದ ಜಿಲ್ಲಾ ಹಾಗೂ ವಿವಿಧ ಘಟಕಗಳ ಪದಾಧಿಕಾರಿಗಳು, ಸದಸ್ಯರು ಹಾಜರಿದ್ದರು.