ವೀರಾಜಪೇಟೆ, ಮೇ ೨೧: ಇಂದಿರಾ ಕ್ಯಾಂಟೀನ್ ಅವ್ಯವಸ್ಥೆ ಕುರಿತು ಸಾರ್ವಜನಿಕರಿಂದ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣಕ್ಕೆ ದೂರುಬಂದ ಹಿನ್ನೆಲೆ ಕರವೇ ಕಾರ್ಯಕರ್ತರು ವೀರಾಜಪೇಟೆಯ ಇಂದಿರಾ ಕ್ಯಾಂಟೀನ್ಗೆ ಭೇಟಿ ನೀಡಿ ಅಲ್ಲಿನ ಅವ್ಯವಸ್ಥೆ ಮತ್ತು ಸ್ವಚ್ಚತೆ ಪಾಲಿಸದಿರುವುದನ್ನು ಗಮನಿಸಿ ಮುಖ್ಯಸ್ಥರನ್ನು ತರಾಟೆಗೆ ತೆಗೆದುಕೊಂಡು ಬಳಿಕ ಅಧಿಕಾರಿಗಳ ಸೂಚನೆ ಅನ್ವಯ ಒಂದು ದಿನಗಳ ಕಾಲ ಕ್ಯಾಂಟೀನ್ ಅನ್ನು ಮುಚ್ಚಿಸಿ ಬಿಸಿ ಮುಟ್ಟಿಸಲಾಯಿತು.
ಈ ಸಂದರ್ಭ ಸ್ಥಳಕ್ಕೆ ಆಗಮಿಸಿದ ಪುರಸಭೆಯ ಸ್ವಚ್ಛತಾ ಅಧಿಕಾರಿ ಕೋಮಲ ಅವರು ಅವ್ಯವಸ್ಥೆಯ ಬಗ್ಗೆ ಗಮನಿಸಿ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದರು.
ಕುಡಿಯುವ ನೀರು, ಟ್ಯಾಂಕ್ ತಟ್ಟೆ ಅಶುಚಿತ್ವದಿಂದ ಕೂಡಿತ್ತು. ಅಡುಗೆ ಕೋಣೆಯಲ್ಲಿರುವ ಫ್ರಿಡ್ಜ್ನಲ್ಲಿ ಕೊಳೆತ ಮೊಟ್ಟೆ ಮತ್ತು ಆಹಾರ ಪದಾರ್ಥಗಳು ಇದ್ದವು. ತಿಂಡಿ ತಿನಿಸುಗಳನ್ನು ತೆರೆದಿಟ್ಟ ಕಾರಣ ನೊಣಗಳು ಕುಳಿತಿದ್ದವು ಎಂದು ಕರವೇ ಕಾರ್ಯಕರ್ತರು ಆರೋಪಿಸಿದರು. ಊಟಕ್ಕೆ ಹತ್ತು ರೂಪಾಯಿ ಹೆಚ್ಚುವರಿ ತೆಗೆದುಕೊಳ್ಳುತ್ತಿರುವ ಬಗ್ಗೆಯೂ ಆಕ್ಷೇಪ ವ್ಯಕ್ತವಾಯಿತು.
ಸ್ಥಳಕ್ಕಾಗಮಿಸಿದ ಅಧಿಕಾರಿಗಳು ಅಲ್ಲಿನ ಉಸ್ತುವಾರಿ ಮತ್ತು ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು.
ಅರೋಗ್ಯ ಅಧಿಕಾರಿ ಕೋಮಲ ಅವರು, ಮುಂದಿನ ದಿನಗಳಲ್ಲಿ ಸ್ವಚ್ಚವಾಗಿಡುವ ಭರವಸೆ ನೀಡಿದರು. ತಪ್ಪು ಮರುಕಳಿಸದಂತೆ ಎಚ್ಚರ ವಹಿಸಲಾಗುವುದು ಎಂದು ಹೇಳಿ ಇಂದಿರಾ ಕ್ಯಾಂಟೀನನ್ನು ಮುಚ್ಚಿಸಿದರು.
ಕರವೇ ಜಿಲ್ಲಾಧ್ಯಕ್ಷ ಫ್ರಾನ್ಸಿಸ್ ಡಿಸೋಜಾ, ಜಿಲ್ಲಾ ಕಾರ್ಯದರ್ಶಿ ಸುರೇಶ್, ಜಿಲ್ಲಾ ಸಲಹೆಗಾರ ಸಜೀಲ್ ಕುಮಾರ್, ಕಾರ್ಯಾಧ್ಯಕ್ಷ ಪ್ರಿತುನ್ ಪೂವಣ್ಣ ಅಯ್ಯನೆರವಂಡ, ವೀರಾಜಪೇಟೆ ತಾಲೂಕು ಅಧ್ಯಕ್ಷÀ ಬೆಲ್ಲು ಕಾರ್ಯಪ್ಪ ಸೇರಿದಂತೆ ಇನ್ನಿತರರು ಹಾಜರಿದ್ದರು.
ಈ ಕುರಿತು ಪ್ರತಿಕ್ರಿಯಿಸಿದ ಪುರಸಭೆಯ ಮುಖ್ಯಾಧಿಕಾರಿ ಪಿ.ಕೆ ನಾಚಪ್ಪ ಇಂದಿರಾ ಕ್ಯಾಂಟೀನ್ ಅವ್ಯವಸ್ಥೆಯ ಬಗ್ಗೆ ಈಗಾಗಲೇ ಗಮನಕ್ಕೆ ಬಂದಿದೆ. ಈ ಕುರಿತು ಕ್ರಮ ತೆಗೆದುಕೊಳ್ಳಲಾಗುತ್ತದೆ. ಮುಂದಿನ ದಿನಗಳಲ್ಲಿ ಈ ರೀತಿಯ ಘಟನೆಗಳು ಮರುಕಳಿಸದಂತೆ ಎಚ್ಚರ ವಹಿಸಲು ಸೂಚನೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.