ಬಾಳೆಲೆ, ಮೇ ೨೧ : ಪ್ರಸ್ತುತದ ಸನ್ನವೇಶದಲ್ಲಿ ಎದುರಾಗುತ್ತಿರುವ ತೈಲ ಬಿಕ್ಕಟ್ಟು ಹಾಗೂ ಇಂಧನ ಸಂರಕ್ಷಣೆಯ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕೆಲವು ಯುವಕರು ಸೈಕಲ್ ಜಾಥಾದೊಂದಿಗೆ ಗಮನ ಸೆಳೆದಿದ್ದಾರೆ.
ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಬಾಳೆಲೆ, ನಿಟ್ಟೂರು ಗ್ರಾಮದ ಯುವಕರು ವಿಶಿಷ್ಟ ರೀತಿಯಲ್ಲಿ ಸೈಕಲ್ ಜಾಥಾ ನಡೆಸಿದರು. ಯುವಕರಾದ ಮುಕ್ಕಾಟಿರ ರೋಶನ್ ದೇವಯ್ಯ, ಕಾಟಿಮಾಡ ಶಮನ್ ಪೊನ್ನಣ್ಣ ಹಾಗೂ ಮಾಚಂಗಡ ಪ್ರಣಾಮ್ ಕರುಂಬಯ್ಯ ಅವರು ಬಾಳೆಲೆಯಿಂದ ಮೈಸೂರಿನವರೆಗೆ ಸುಮಾರು ೧೦೦ ಕಿಲೋಮೀಟರ್ ದೂರವನ್ನು ಸೈಕಲ್ ಮೂಲಕ ಕ್ರಮಿಸಿ ಗಮನ ಸೆಳೆದರು.
ಬಳಿಕ ಮರುದಿನ ಅದೇ ಮಾರ್ಗದ ಮೂಲಕ ಮೈಸೂರಿನಿಂದ ಬಾಳೆಲೆಗೆ ಮರಳುವ ಮೂಲಕ ಒಟ್ಟು ೨೦೦ ಕಿಲೋಮೀಟರ್ ಸೈಕಲ್ ಸವಾರಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದರು. ಈ ಮೂಲಕ ಇಂಧನ ಉಳಿತಾಯದ ಮಹತ್ವವನ್ನು ಜನರಿಗೆ ತಿಳಿಸುವ ಪ್ರಯತ್ನ ನಡೆಸಿದರು.
ಪ್ರಸ್ತುತ ಹೆಚ್ಚುತ್ತಿರುವ ಇಂಧನ ಬಳಕೆ, ತೈಲ ಸಂಪನ್ಮೂಲಗಳ ಮೇಲಿನ ಅವಲಂಬನೆ ಹಾಗೂ ಪರಿಸರ ಮಾಲಿನ್ಯದಂತಹ ಸಮಸ್ಯೆಗಳ ಹಿನ್ನೆಲೆಯಲ್ಲಿ ಸಾರ್ವಜನಿಕರು ಅಗತ್ಯವಿರುವ ಸಂದರ್ಭಗಳಲ್ಲಿ ಸಾರ್ವಜನಿಕ ಸಾರಿಗೆ ವ್ಯವಸ್ಥೆಗಳಾದ ರೈಲು ಹಾಗೂ ಬಸ್‌ಗಳನ್ನು ಹೆಚ್ಚು ಬಳಸಬೇಕು ಎಂದು ಅವರು ಕರೆ ನೀಡಿದರು. ಜೊತೆಗೆ ದಿನನಿತ್ಯದ ಚಿಕ್ಕ ದೂರದ ಸಂಚಾರಗಳಿಗೆ ಸೈಕಲ್ ಬಳಕೆಯನ್ನು ಹೆಚ್ಚಿಸುವುದರಿಂದ ಆರೋಗ್ಯ ವೃದ್ಧಿಯಾಗುವುದರ ಜೊತೆಗೆ ಪರಿಸರ ಸಂರಕ್ಷಣೆಯೂ ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಯುವಕರ ಈ ಜಾಗೃತಿ ಅಭಿಯಾನಕ್ಕೆ ಸ್ಥಳೀಯ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದ್ದು, ಇಂತಹ ಪ್ರಯತ್ನಗಳು ಸಮಾಜದಲ್ಲಿ ಉತ್ತಮ ಸಂದೇಶ ನೀಡುವ ಕೆಲಸ ಮಾಡುತ್ತವೆ ಎಂದು ಅಭಿಪ್ರಾಯ ವ್ಯಕ್ತವಾಯಿತು.