ಗೋಣಿಕೊಪ್ಪ, ಮೇ ೨೧: ಪೊನ್ನಂಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವಾರ್ಷಿಕ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ತಾಲೂಕು ಮತ್ತು ಜಿಲ್ಲಾ ಪ್ರಶಸ್ತಿಗೆ ಪ್ರತ್ಯೇಕವಾಗಿ ವರದಿ ಸಲ್ಲಿಸಬಹುದಾಗಿದೆ. ೨೦೨೫ನೇ ಸಾಲಿನ ಜನವರಿ ೧ ರಿಂದ ಡಿಸೆಂಬರ್ ೩೧ ರವರೆಗೆ ಪ್ರಕಟವಾದ ವರದಿಗಳ ಮೂರು ಪ್ರತಿಗಳನ್ನು ಮೇ ೨೮ ರ ಒಳಗೆ ತಲುಪುವಂತೆ ಕಳುಹಿಸಬೇಕಿದೆ.
ತಾಲೂಕು ಮಟ್ಟದ ಪ್ರಶಸ್ತಿಗೆ ಪತ್ರಕರ್ತ ಸಂಘದ ರಾಜ್ಯ ಉಪಾಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಅವರು ತಮ್ಮ ಸೋದರ ಮಾವಂದಿರಾದ ದೇಯಂಡ ಪೂಣಚ್ಚ ಹಾಗೂ ಉಮೇಶ್ ಜ್ಞಾಪಕಾರ್ಥವಾಗಿ ಸ್ಥಾಪಿಸಿರುವ ಅತ್ಯುತ್ತಮ ಗ್ರಾಮೀಣ ವರದಿ ಪ್ರಶಸ್ತಿ, ಪತ್ರಕರ್ತರ ಸಂಘದ ರಾಷ್ಟಿçÃಯ ಸಮಿತಿ ಸದಸ್ಯರಾಗಿದ್ದ ಎಸ್.ಎ. ಮುರುಳಿಧರ್ ಅವರು ತಮ್ಮ ಸಹೋದರ ಗಣೇಶ್ ಜ್ಞಾಪಕಾರ್ಥವಾಗಿ ಸ್ಥಾಪಿಸಿರುವ ಅತ್ಯುತ್ತಮ ಕ್ರೀಡಾ ವರದಿ ಪ್ರಶಸ್ತಿ, ವೀರಾಜಪೇಟೆ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷರಾಗಿದ್ದ ಸಣ್ಣುವಂಡ ಶ್ರೀನಿವಾಸ್ ಚಂಗಪ್ಪ ಅವರು ತಮ್ಮ ತಂದೆ ಸಣ್ಣುವಂಡ ಮಾದಪ್ಪ, ತಾಯಿ ಜಾನಕಿ ಮಾದಪ್ಪ ಜ್ಞಾಪಕಾರ್ಥವಾಗಿ ಸ್ಥಾಪಿಸಿರುವ ಅತ್ಯುತ್ತಮ ಪರಿಸರ ಪ್ರಶಸ್ತಿಗೆ ವರದಿ ಸಲ್ಲಿಸಬಹುದಾಗಿದೆ.
ಜಿಲ್ಲಾಮಟ್ಟದ ಪ್ರಶಸ್ತಿಗೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರು ವರದಿ ನೀಡಬಹುದು.
ಸಂಘದ ನಿರ್ದೇಶಕ ಬಿ.ವಿ. ಸಂತೋಷ್ ರೈ ಅವರು ತಮ್ಮ ತಾಯಿ ಬಿ.ವಿ. ಸುಮತಿ ರೈ ಅವರ ಜ್ಞಾಪಕಾರ್ಥ ನೀಡಿರುವ ಮಾನವೀಯ ವರದಿ ಜಿಲ್ಲಾ ಪ್ರಶಸ್ತಿ, ಸಣ್ಣುವಂಡ ಕೆ. ವಿನಯ್ ಅಯ್ಯಪ್ಪ ತನ್ನ ತಾಯಿ, ಮೇರುನಟಿ ಸಣ್ಣುವಂಡ ಶಶಿಕಲಾ ಕಾವೇರಪ್ಪ ಜ್ಞಾಪಕಾರ್ಥದ ಚಿತ್ರರಂಗ ಜಿಲ್ಲಾ ಪ್ರಶಸ್ತಿಗೆ ವರದಿ ಸಲ್ಲಿಸಬೇಕಿದೆ.
ವರದಿಗಳನ್ನು ಕಿಶೋರ್ ನಾಚಪ್ಪ, ರವಿಕಿರಣ ಕಾಂಪ್ಲೆಕ್ಸ್, ಸರ್ಕಾರಿ ಆಸ್ಪತ್ರೆ ಸಮೀಪ, ಗೋಣಿಕೊಪ್ಪ, ವಿಳಾಸಕ್ಕೆ ಕಳುಹಿಸಬೇಕಿದೆ ಎಂದು ಪ್ರಧಾನ ಕಾರ್ಯದರ್ಶಿ ಎನ್.ಎನ್. ದಿನೇಶ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.