ಸೋಮವಾರಪೇಟೆ, ಮೇ ೨೨: ನಿವೇಶನ ರಹಿತರಿಗೆ ನಿವೇಶನ ನೀಡುವಂತೆ ಒತ್ತಾಯಿಸಿ ತಾಲೂಕಿನ ಕುಂಬೂರು ಗ್ರಾಮದಲ್ಲಿ ಕರ್ನಾಟಕ ಬಹುಜನ ಕಾರ್ಮಿಕ ಸಂಘಟನೆಯ ನೇತೃತ್ವದಲ್ಲಿ ವಸತಿರಹಿತ ಕಾರ್ಮಿಕರು ನಡೆಸುತ್ತಿರುವ ಆಹೋರಾತ್ರಿ ಧರಣಿ ೨೧ ನೇ ದಿನ ಪೂರೈಸಿದೆ.

ಧರಣಿಯ ನೇತೃತ್ವ ವಹಿಸಿರುವ ಸಂಘಟನೆಯ ಅಧ್ಯಕ್ಷ ಮೊಣ್ಣಪ್ಪ ಅವರು ಮಾತನಾಡಿ, ಕಳೆದ ೨೦ ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದರೂ ಈವರೆಗೆ ಯಾವುದೇ ಅಧಿಕಾರಿ, ಜನಪ್ರತಿನಿಧಿಗಳು ಸೂಕ್ತ ಸ್ಪಂದಟಿ ನೀಡಿಲ್ಲ. ಪ್ರತಿಭಟನೆಯನ್ನು ಮೊಟಕು ಗೊಳಿಸಲು ಪ್ರಯತ್ನಿಸುತ್ತಿದ್ದಾರೆಯೇ ಹೊರತು, ಬಡವರಿಗೆ ನಿವೇಶನ ನೀಡುವ ಬಗ್ಗೆ ಕ್ರಮ ವಹಿಸುತ್ತಿಲ್ಲ ಎಂದು ಆರೋಪಿಸಿದರು.

ನಿವೇಶನ ಲಭಿಸುವವರೆಗೂ ಧರಣಿಯನ್ನು ಮುಂದುವರೆಸಲಾಗುವುದು. ಮುಂದಿನ ದಿನಗಳಲ್ಲಿ ಹೋರಾಟದ ತೀವ್ರತೆಯನ್ನು ಹೆಚ್ಚಿಸಲಾಗುವುದು. ನಾವುಗಳು ತಿಳಿಸಿರುವ ಜಾಗವನ್ನು ಸರ್ವೆ ನಡೆಸಿ, ನಿವೇಶನ ರಹಿತರಿಗೆ ನೀಡಬೇಕು. ಅನಿರ್ದಿಷ್ಟಾವಧಿಯ ಧರಣಿ ಮುಂದುವರೆಯಲಿದೆ ಎಂದು ತಿಳಿಸಿದರು.