ನಾಪೋಕ್ಲು, ಮೇ ೨೨: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ವತಿಯಿಂದ ನಡೆಸುವ ಶೌರ್ಯ ವಿಪತ್ತು ನಿರ್ವಹಣಾ ಸಮಿತಿ ಕೋರ್ ಕಮಿಟಿ ಸಭೆಯನ್ನು ಮಡಿಕೇರಿ ಕಚೇರಿಯಲ್ಲಿ ಆಯೋಜಿಸಲಾಯಿತು. ಮಳೆಗಾಲದಲ್ಲಿ ಉಂಟಾಗುವ ಅನಾಹುತಗಳಿಗೆ ಶೀಘ್ರ ಸ್ಪಂದನ ನೀಡಲು ಮಡಿಕೇರಿ ತಾಲೂಕಿನಲ್ಲಿ ೧೫ ಜನರ ತುರ್ತು ಸ್ಪಂದನ ತಂಡವನ್ನು ರಚನೆ ಮಾಡಲಾಯಿತು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೊಡಗು ಜಿಲ್ಲಾ ನಿರ್ದೇಶಕ ವಿಠಲ್ ಸಾಲ್ಯಾನ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ಮಾರ್ಗದರ್ಶನದಲ್ಲಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅಡಿಯಲ್ಲಿ ಶೌರ್ಯ ವಿಪತ್ತು ನಿರ್ವಹಣಾ ಸಮಿತಿಯನ್ನು ರಚಿಸಲಾಗಿದೆ. ಇದು ಕೇವಲ ಒಂದು ಸಂಘಟನೆಯಲ್ಲ, ಸಂಕಷ್ಟದಲ್ಲಿರುವವರಿಗೆ ನೆರವಾಗಲು ಸದಾ ಸಿದ್ಧರಿರುವ ಸ್ವಯಂಸೇವಕರ ಬಲಿಷ್ಠ ಪಡೆ ಎಂದರು.

ವಿಪತ್ತು ನಿರ್ವಹಣಾ ವಿಭಾಗದ ಯೋಜನಾಧಿಕಾರಿ ಜೈವಂತ್ ಪಟಗಾರ್ ಮಾತನಾಡಿದರು. ಮಡಿಕೇರಿ ತಾಲೂಕು ಕ್ಷೇತ್ರ ಯೋಜನಾಧಿಕಾರಿ ಪುರುಷೋತ್ತಮ ಪ್ರಾಸ್ತಾವಿಕವಾಗಿ ಮಾತನಾಡಿದರು. ಜನಜಾಗೃತಿ ಮೇಲ್ವಿಚಾರಕ ನಿತೇಶ್ ಕೆ., ವಲಯಗಳ ಮೇಲ್ವಿಚಾರಕರು, ಸಂಯೋಜಕರು, ಘಟಕ ಪ್ರತಿನಿಧಿಗಳು, ತುರ್ತು ಸ್ಪಂದನಾ ತಂಡದ ಸ್ವಯಂಸೇವಕರು ಉಪಸ್ಥಿತರಿದ್ದರು. ವಲಯ ಮೇಲ್ವಿಚಾರಕ ಅಶ್ವಥ್ ಸ್ವಾಗತಿಸಿ, ವಿನೋದ್ ನಿರೂಪಿಸಿ, ವಂದಿಸಿದರು