ಚೆಟ್ಟಳ್ಳಿ, ಮೇ ೨೫: ಚೆಟ್ಟಳ್ಳಿ ಪ್ರೌಢಶಾಲೆಯ ೧೯೯೩-೯೪ನೇ ಸಾಲಿನ ಹಳೆ ವಿದ್ಯಾರ್ಥಿಗಳ ವತಿಯಿಂದ ಗುರುಗಳಿಗೆ ಗೌರವ ಸಲ್ಲಿಸುವ ‘ಗುರುವಂದನಾ’ ಕಾರ್ಯಕ್ರಮ ಕುಶಾಲನಗರದ ರಾಜ್ ಗಾರ್ಡನಿಯಾ ಕೂರ್ಗ್ ರೆಸಾರ್ಟ್ನಲ್ಲಿ ನೆರವೇರಿತು.
ಕಾರ್ಯಕ್ರಮದಲ್ಲಿ ವಿದ್ಯಾರ್ಜನೆ ನೀಡಿದ ಶಿಕ್ಷಕರಾದ ಪಿ.ಎಸ್. ಮಾಚಯ್ಯ, ವೈರಮುಡಿ ಹಾಗೂ ನಿವೃತ್ತ ಶಾಲಾ ಸಿಬ್ಬಂದಿ ರಾಮೇಗೌಡ ಹಾಗೂ ಕಾರ್ಯಕ್ರಮವನ್ನು ಆಯೋಜಿಸಿದ ರವಿಚಂದ್ರ. ಟಿ.ಎಸ್. ಅವರನ್ನು ಸನ್ಮಾನಿಸಿ ಗೌರವಿಸ ಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಶಾಲೆಯ ದಿನಗಳು, ಅಂದಿನ ವಿದ್ಯಾರ್ಥಿಗಳ ಸಾಧನೆಗಳು ಹಾಗೂ ಶಿಕ್ಷಣದ ಮಹತ್ವವನ್ನು ಸ್ಮರಿಸಿದರು.
ಹಳೆ ವಿದ್ಯಾರ್ಥಿಗಳು ತಮ್ಮ ಜೀವನ ರೂಪಿಸುವಲ್ಲಿ ಶಿಕ್ಷಕರ ಪಾತ್ರವನ್ನು ನೆನಪಿಸಿಕೊಂಡು ಕೃತಜ್ಞತೆ ಸಲ್ಲಿಸಿದರು. ಶಿಕ್ಷಕರು ಮತ್ತು ವಿದ್ಯಾರ್ಥಿಗಳ ನಡುವಿನ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸುವ ಉದ್ದೇಶದಿಂದ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಇಂದಿರಾ ಪಿ.ಕೆ. ಪ್ರಾರ್ಥನೆ ನೆರವೇರಿಸಿದರು. ವಾಣಿ ಸುರೇಶ್ ಸ್ವಾಗತಿಸಿ, ನಂತರ ವಂದಿಸಿದರು. ಹಳೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.