*ಗೋಣಿಕೊಪ್ಪಲು, ಮೇ ೨೬: ದಕ್ಷಿಣ ಕೊಡಗಿನ ಬುಡಕಟ್ಟು ಜನರ ವಿಶಿಷ್ಟ ಆಚರಣೆಗಳಲ್ಲಿ ಒಂದಾಗಿರುವ ಬೇಡು ಹಬ್ಬ (ಕುಂಡೆ ಹಬ್ಬ) ತಾ. ೨೭ ಹಾಗೂ ೨೮ ರಂದು ನಡೆಯಲಿದೆ. ಬೈಗುಳ, ವೇಷಭೂಷಣ, ತಾಳಮೇಳ ಹಾಗೂ ಸಂಭ್ರಮದ ಮೂಲಕ ನಡೆಯುವ ಈ ಹಬ್ಬವು ಕೊಡಗಿನ ಅತ್ಯಂತ ವಿಶಿಷ್ಟ ಆದಿವಾಸಿ ಆಚರಣೆಗಳಲ್ಲೊಂದು.
ಬುಡಕಟ್ಟು ಜನರು ವಿಶೇಷ ವೇಷಧಾರಿಗಳಾಗಿ, ಕೈಗೆ ಸಿಕ್ಕ ವಸ್ತುಗಳನ್ನು ತಾಳಮೇಳವನ್ನಾಗಿ ಮಾಡಿಕೊಂಡು ಕುಣಿದು ಕುಪ್ಪಳಿಸುತ್ತಾ ಕಾಣಿಕೆ ಬೇಡುವ ಮೂಲಕ ಹಬ್ಬವನ್ನು ಆಚರಿಸುತ್ತಾರೆ. ಸಂಪ್ರದಾಯದ ಭಾಗವಾಗಿ ಎದುರಿಗೆ ಸಿಕ್ಕವರನ್ನು ಬೈಯುತ್ತಾ ಹಣ ಬೇಡುವುದು ಈ ಹಬ್ಬದ ವಿಶೇಷತೆಯಾಗಿದೆ. ತಾ. ೨೭ರ ಬೆಳಿಗ್ಗೆಯಿಂದ ಆಚರಣೆ ಆರಂಭಗೊಳ್ಳಲಿದೆ.
ಎರಡು ದಿನಗಳ ಕಾಲ ಬೇಡಿದ ಹಣವನ್ನು ದೇವರಪುರದಲ್ಲಿರುವ ಭದ್ರಕಾಳಿ ದೇವಸ್ಥಾನದ ಹುಂಡಿಗೆ ಹಾಕಿ ಹಬ್ಬಕ್ಕೆ ತೆರೆ ಎಳೆಯಲಿದ್ದಾರೆ. ತಾ. ೨೮ ರಂದು ಮಧ್ಯಾಹ್ನ ಭದ್ರಕಾಳಿ ದೇವಸ್ಥಾನದ ಬಳಿ ಸಾವಿರಾರು ಜನರು ಸೇರಲಿದ್ದಾರೆ. ತಂಡೋಪತAಡವಾಗಿ ಆಗಮಿಸುವ ವೇಷಧಾರಿಗಳು ದೇವಸ್ಥಾನದ ಮುಂಭಾಗದಲ್ಲಿರುವ ಆಲ ಮತ್ತು ಗೋಳಿ ಮರದ ಸುತ್ತ ತಾಳಮೇಳಗಳೊಂದಿಗೆ ಕಣಿದು ಆನಂದಿಸಲಿದ್ದಾರೆ.
ಹಿAದೆ ಮದ್ಯಪಾನ ಮಾಡಿ ಹೆದ್ದಾರಿಯಲ್ಲಿ ವಾಹನ ತಡೆದು ಹಣ ಬೇಡುವ ಸಂದರ್ಭಗಳಲ್ಲಿ ಅಪಘಾತಗಳು ಸಂಭವಿಸಿದ್ದವು. ಜೊತೆಗೆ ಕೆಲ ಅನ್ಯರು ವೇಷಧಾರಿಗಳಾಗಿ ಅಶ್ಲೀಲ ವರ್ತನೆ ತೋರಿದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಕಳೆದ ಕೆಲವು ವರ್ಷಗಳಿಂದ ವೇಷಧಾರಿಗಳಿಗೆ ಮುಖ್ಯರಸ್ತೆ ಹಾಗೂ ಪಟ್ಟಣ ಪ್ರವೇಶಕ್ಕೆ ನಿರ್ಬಂಧ ಹೇರಿದೆ. ಇದೀಗ ವೇಷಧಾರಿಗಳು ನೇರವಾಗಿ ದೇವಸ್ಥಾನದ ಪ್ರದೇಶಕ್ಕೆ ತೆರಳಿ ಆಚರಣೆ ನಡೆಸುತ್ತಾರೆ. ಅದಲ್ಲದೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಭ್ಯತೆಯಿಂದ ನಡೆದುಕೊಳ್ಳುವಂತೆ ಸೂಚಿಸಿದ್ದು, ಅಸಭ್ಯ ವರ್ತನೆ ಕಂಡುಬAದಲ್ಲಿ ಕಾನೂನು ಕ್ರಮಕೈಗೊಳ್ಳುವ ಎಚ್ಚರಿಕೆಯನ್ನು ನೀಡಿದ್ದಾರೆ.
ದೇವರಪುರದಲ್ಲಿರುವ ಅಯ್ಯಪ್ಪ ದೇವಸ್ಥಾನದಲ್ಲಿ ತಾ. ೨೮ ರಂದು ಮಧ್ಯಾಹ್ನ ೨.೩೦ ಗಂಟೆಗೆ ಎಲ್ಲಾ ವೇಷಧಾರಿಗಳು ಸೇರಿ ದೇವರ ಸನ್ನಿಧಿಯಲ್ಲಿ ಹಾಡುತ್ತಾ, ಕುಣಿಯುತ್ತಾ ತಮ್ಮ ಹರಕೆಯನ್ನು ಸಲ್ಲಿಸುತ್ತಾರೆ
ಹಿನ್ನೆಲೆ ಹಾಗೂ ಹಬ್ಬದ ವಿಶೇಷ
ಕೊಡಗಿನಲ್ಲಿ ದೇವರ ಕಾಡುಗಳ ಸಂರಕ್ಷಣೆಯೊAದಿಗೆ ಸಂಬAಧಿಸಿದ ಹಲವು ಬೇಡುಹಬ್ಬಗಳು ನಡೆಯುತ್ತವೆ. ಅದರಲ್ಲಿ ದೇವರಪುರದ ಈ ಆಚರಣೆ ಪ್ರಮುಖವಾಗಿದೆ. ಆದಿವಾಸಿ ಬೆಟ್ಟಕುರುಬ ಸಮುದಾಯದ ತರಗು ವಕ್ಕ ಕುಟುಂಬಗಳು ಹಬ್ಬದ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರವಹಿಸುತ್ತವೆ.
ತರಗು ಗಿಡಗಳಿಂದ ದೇವಸ್ಥಾನ ಸ್ವಚ್ಛಗೊಳಿಸುವುದು, ಬಿದಿರಿನ ಕುದುರೆ ತಯಾರಿಸುವುದು ಸೇರಿದಂತೆ ವಿವಿಧ ಸೇವೆಗಳನ್ನು ಇವರು ನಿರ್ವಹಿಸುತ್ತಾರೆ. ತಾ. ೨೭ ರಂದು ಪಟ್ಟಣಿ , ೨೮ ರಂದು ಕುದುರೆ ತೆಗೆಯುವ ಆಚರಣೆ ನಡೆಯಲಿದೆ.
ಪಟ್ಟಣಿ
ಪಟ್ಟಣಿ ದಿನದ ಬೆಳಿಗ್ಗೆಯಿಂದ ಹಬ್ಬದ ಕಟ್ಟುಪಾಡಿಗೆ ಒಳಪಡುವ ಊರಿನವರು ಆಹಾರ ತ್ಯಜಿಸಿ ಫಲಹಾರ ಮಾತ್ರ ಸೇವಿಸುತ್ತಾರೆ. ಹಾಗೇ ಮಾಂಸಾಹಾರಗಳನ್ನು ತಿನ್ನದೆ, ಪ್ರಾಣಿ ಹಿಂಸೆ ಮಾಡದೆ ದೇವರಕಟ್ಟು ಪಾಲಿಸುತ್ತಾರೆ. ದೇವಸ್ಥಾನದ ಬಳಿ ಇರುವ ಅಂಬಲಕ್ಕೆ (ದೇವರ ಪರಿಕರ ಇಡುವ ಸ್ಥಳ) ಊರಿನವರೆಲ್ಲರು ಮಧ್ಯಾಹ್ನದ ವೇಳೆ ಸೇರಿ ಕಡತಲೆ, ತೂರೆಕೋಲು, ಬೆಳ್ಳಿಯ ಹರಕೆ ವಸ್ತುಗಳಾದ ಕುದುರೆ, ನಾಯಿ, ಮಗು ತೊಟ್ಟಿಲು ಇತ್ಯಾದಿ ದೈವಿಕ ವಸ್ತುಗಳನ್ನು ಶುದ್ದೀಕರಿಸಿ ಅಯ್ಯಪ್ಪ ದೇವಸ್ಥಾನಕ್ಕೆ ಪೂಜೆ ಸಲ್ಲಿಸುತ್ತಾರೆ. ಈ ದೈವಿಕ ವಸ್ತುಗಳನ್ನು ಹರಕೆ ಒಪ್ಪಿಸಲು ಬಳಸುತ್ತಾರೆ. ಬೇಟೆಕುರುಬ ಸ್ಥಾನಕ್ಕೆ ಮಣ್ಣಿನಿಂದ ಮಾಡಿದ ಬೇಟೆ ನಾಯಿಯ ಹರಕೆ ಸಲ್ಲಿಸಿ ಭದ್ರಕಾಳಿ ದೇವಸ್ಥಾನಕ್ಕೆ ಒಡ್ಡೋಲಗದೊಂದಿಗೆ ತೆರಳಿ ಭದ್ರಕಾಳಿ ದೇವಿಗೆ ಪೂಜೆ ಸಲ್ಲಿಸಿ ಕುರುಂಬ ದೇವರ ಪ್ರೀತಿಗೆ ಪಾತ್ರವಾದ ಮಣ್ಣಿನಿಂದ ಮಾಡಿದ ನಾಯಿಯನ್ನು ಅರ್ಪಿಸಲಾಗುತ್ತದೆ. ಹರಕೆ ಹೊತ್ತ ಯುವಕರಲ್ಲಿ ಆದ್ಯತೆ ಮೇರೆಗೆ ದೇವರ ಅನುವಾದದೊಂದಿಗೆ ಇಬ್ಬರು ಯುವಕರನ್ನು ಕುದುರೆ ತೆಗೆಯುವುದಕ್ಕೆ ಆರಿಸಿ ಅಯ್ಯಪ್ಪ ದೇವಸ್ಥಾನಕ್ಕೆ ತೆರಳಿ ಹಣ್ಣುಕಾಯಿ ಪಡೆದು ದೇವಸ್ಥಾನದಲ್ಲಿ ಭಕ್ತರು ಹರಕೆ ನೀಡಿದ ಅಕ್ಕಿ, ಧಾನ್ಯ, ತರಕಾರಿಗಳಿಂದ ಮಾಡಿದ ಅಡುಗೆಯನ್ನು ಊಟ ಮಾಡುತ್ತಾರೆ.
ಕುದುರೆ ತೆಗೆಯುವುದು
ಮರುದಿನ (ಗುರುವಾರ) ಬೆಳಿಗ್ಗೆಯಿಂದಲೇ ವೇಷಧಾರಿ ಭಕ್ತರು ಊರಿನ ಮನೆ-ಮನೆ ಹಾಗೂ ಪಟ್ಟಣಗಳಲ್ಲಿ ಬೇಡುತ್ತಾ ದೇವರಿಗೆ ಕಾಣಿಕೆ ಪಡೆಯುತ್ತಾರೆ. ಹಿಂದಿನ ಸಂಸ್ಕೃತಿಯAತೆ ಊರಿನೊಳಗೆ ವಾಸಿಸುವ ಹರಕೆ ಹೊತ್ತ ಭಕ್ತರು ಮತ್ತು ಜೇನು ಕುರುಬರು ಮಾತ್ರ ವೇಷಧಾರಿಗಳಾಗಿ ಅಯ್ಯಪ್ಪ, ಭದ್ರಕಾಳಿ, ಬೋಟೆ ಕರುಂಬ ದೇವರನ್ನು ಹೊಗಳುತ್ತಾ ಕಾಣಿಕೆ ಬೇಡುತ್ತಾರೆ. ಮಧ್ಯಾಹ್ನ ೨ ಗಂಟೆಯ ವೇಳೆಗೆ ಎಲ್ಲಾ ವೇಷಧಾರಿ ಭಕ್ತರು ಅಯ್ಯಪ್ಪ ಭದ್ರಕಾಳಿ, ಬೇಟೆ ಕರುಂಬ ದೇವಸ್ಥಾನಕ್ಕೆ ಬಂದು ಆವರಣದಲ್ಲಿ ದೇವರನ್ನು ಹೊಗಳುತ್ತಾ ಕುಣಿದು ಹರಕೆ ಸಲ್ಲಿಸುತ್ತಾರೆ. ಸರಿಯಾಗಿ ೨ ಗಂಟೆಗೆ ಕುದುರೆ ತೆಗೆಯಲು ಹರಕೆ ಹೊತ್ತ ಇಬ್ಬರು ಯುವ ಭಕ್ತರು ಕೊಡವ ಸಂಪ್ರದಾಯದ ಮಂಡೆತುಣಿ ಹಾಕಿ ತರಗು ವಕ್ಕದ ಬೇಟೆ ಕುರುಬರು ಸಂಗ್ರಹಿಸಿದ ಬಿದಿರಿನ ಕುದುರೆಯನ್ನು ಊರಿನ ಮುಖ್ಯಸ್ಥರು ಹಾಗೂ ಹಿರಿಯರ ಆಶೀರ್ವಾದದೊಂದಿಗೆ ಅಂಬಲದಲ್ಲಿ ಪೂಜೆ ಸಲ್ಲಿಸಿ ಭಂಡಾರ ಪೆಟ್ಟಿಗೆ ಹಾಗೂ ಪಣಿಕರು ತೆಗೆಯುವ ಮೊಗದೊಂದಿಗೆ ಅಯ್ಯಪ್ಪ ದೇವಸ್ಥಾನಕ್ಕೆ ಆಗಮಿಸುತ್ತಾರೆ.
ಭದ್ರಕಾಳಿ ದೇವರ ಮೊಗಕ್ಕೆ ಮತ್ತು ಕುದುರೆಗೆ ಪೂಜೆ ಸಲ್ಲಿಸಿದ ನಂತರ ಮೊಗದೊಂದಿಗೆ ಒಡ್ಡೋಲಗ ಸಮೇತ ದೇವರ ಕಾಡಿನಲ್ಲಿ ಭದ್ರಕಾಳಿ ದೇವಸ್ಥಾನಕ್ಕೆ ಪೂಜಾರಿ, ತಕ್ಕ ಮುಖ್ಯಸ್ಥರು, ಊರಿನ ಹಿರಿಯರು ಹಾಗೂ ಭಕ್ತ ವೇಷಧಾರಿಗಳೊಂದಿಗೆ ಗಂಡಸರು ಮಾತ್ರ ಭದ್ರಕಾಳಿ ದೇವಸ್ಥಾನಕ್ಕೆ ತೆರಳುತ್ತಾರೆ. ಆಹಾರ ಹರಕೆ ಬಳಿಕ ಅಯ್ಯಪ್ಪ ದೇವಸ್ಥಾನಕ್ಕೆ ಬಂದು ಭಕ್ತರ ಹರಕೆ, ಕಾಣಿಕೆ, ಭಂಡಾರದೊAದಿಗೆ ಅಂಬಲಕ್ಕೆ ತೆರಳಿ ಪೂಜಾ ಪರಿಕರಗಳನ್ನು ಅಲ್ಲಿಟ್ಟು ಭದ್ರಕಾಳಿ ದೇವರ ಮೊಗಕ್ಕೆ ಮೊಗ ಪೂಜೆ ಸಲ್ಲಿಸುವುದರೊಂದಿಗೆ ಮುಕ್ತಾಯವಾಗುತ್ತದೆ.
ಈ ಬೇಡು ಹಬ್ಬವನ್ನು ಮುಖ್ಯವಾಗಿ ಸಣ್ಣುವಂಡ ಕುಟುಂಬಸ್ಥರು ಮುಖ್ಯಸ್ಥರಾಗಿ ನಡೆಸುತ್ತಾ ಬರುತ್ತಿದ್ದಾರೆ. ಈ ಕುಟುಂಬಸ್ಥರಿಗೆ ಊರಿನ ಇತರ ಕುಟುಂಬದವರಾದ ಕಳ್ಳಿಚಂಡ, ಮನೆಯಪಂಡ, ಚಕ್ಕೇರ, ಅಜ್ಜಿನಿಕಂಡ, ಕಂಜಿತAಡ ಕುಟುಂಬಸ್ಥರು ಸಹಕಾರ ನೀಡುತ್ತಾರೆ.
ವನವಾಸಿ ಕಲ್ಯಾಣ ವತಿಯಿಂದ ಭಕ್ತರಿಗೆ ಹಾಗೂ ವೇಷಧಾರಿಗಳಿಗೆ ಅನ್ನಸಂತರ್ಪಣೆಯನ್ನು ಪ್ರತಿ ವರ್ಷದಂತೆ ಈ ವರ್ಷವೂ ೧೦ ಸಾವಿರಕ್ಕೂ ಹೆಚ್ಚು ಜನರಿಗೆ ದಾಸೋಹ ನಡೆಯಲಿದೆ.
- ಎನ್.ಎನ್. ದಿನೇಶ್