ಕೊಲ್ಲಿ ರಾಷ್ಟçಗಳಲ್ಲಿ ನಡೆಯುತ್ತಿರುವ ಸಮರದ ಕಾವು ಇದೀಗ ಜಗತ್ತಿನ ಎಲ್ಲ ದೇಶಗಳಮೇಲೂ ತನ್ನ ಕರಾಳ ಹಸ್ತವನ್ನು ಚಾಚಿ ಅಲ್ಲಿರುವ ಎಲ್ಲ ವರ್ಗದ ಜನರನ್ನೂ ಹಿಸುಕಿ ಹಿಪ್ಪೆಯನ್ನಾಗಿಸುತ್ತಿದೆ. ಅದರಲ್ಲಿಯೂ ತೈಲದ ಮತ್ತು ತೈಲದ ಇತರ ಉತ್ಪನ್ನಗಳ ಮೇಲೆ ಹಾಕಿರುವ ಬೆಲೆಯ ದಿಗ್ಬಂಧನದಿAದ ಜನರು ಹೈರಾಣರಾಗಿಬಿಟ್ಟಿದ್ದಾರೆ, ಭಾರತವೂ ಕೊಲ್ಲಿರಾಷ್ಟçದ ಸಮರದ ಈ ಹೊಡೆತಗಳಿಗೆ ಸಿಕ್ಕಿ ನಲುಗುತ್ತಿವೆ. ತೈಲದ ಪ್ರತಿಯೊಂದು ತೊಟ್ಟುಸಹ ಈಗ ಅಮೂಲ್ಯವಾಗಿಬಿಟ್ಟಿದೆ. ಹಾಗಾಗಿ ತೈಲದ ಬಳಕೆಯ ಮೇಲೆ ನಾವು ಎಷ್ಟು ಜಾಗೃತರಾದರೂ ಅದು ಕಡಿಮೆ ಎಂದೆನಿಸಿಬಿಡುತ್ತದೆ.
ಈ ನಿಟ್ಟಿನಲ್ಲಿ ದೇಶದ ನಾಯಕರ ಜೊತೆಯಲ್ಲಿ ಎಲ್ಲ ಶ್ರೀಸಾಮಾನ್ಯರೂ ಕೈಜೋಡಿಸಿ ತೈಲಸಂಕಷ್ಟದ ಬಿಕ್ಕಟ್ಟನ್ನು ಕೆಲವು ಮಾರ್ಗಗಳ ಮೂಲಕ ತುಸುವಾದರೂ ಕಡಿಮೆಮಾಡಿಕೊಳ್ಳಬಹುದು.
ವಾಹನಗಳಲ್ಲಿ ಇಂಧನದ ರೂಪದಲ್ಲಿ ಅತಿಹೆಚ್ಚು ತೈಲವು ಬಳಕೆಯಾಗುತ್ತಿದೆ, ಆದುದರಿಂದ ತೈಲವನ್ನು ಇಂಧನವಾಗಿ ಬಳಸುವ ವಾಹನಗಳ ಬದಲಿಗೆ ವಿದ್ಯುತ್ ವಾಹನಗಳನ್ನು ಬಳಕೆಗೆ ತರುವುದು ಒಂದು ಉತ್ತಮ ಪರ್ಯಾಯಮಾರ್ಗ ವಾಗಿದೆ,. ಆರಂಭದಲ್ಲಿ ವಿದ್ಯುತ್ ವಾಹನಗಳ ಬೆಲೆಯು ತುಸು ಹೆಚ್ಚು ಎಂದು ಎನಿಸಿದರೂ ಅದರ ನಿರಂತರ ಬಳಕೆಯಿಂದ ಕೆಲವೇ ವರ್ಷಗಳಲ್ಲಿ ವಾಹನವನ್ನು ಕೊಳ್ಳಲು ಬಳಸಿದ ಹಣವು ನಮ್ಮ ಕೈಯಲ್ಲಿ ಉಳಿಯಬಹುದು. ಈ ವಾಹನಗಳಿಗೆ ಬೇಕಾದ ವಿದ್ಯುತ್ತನ್ನು ದೊಡ್ಡ ಗಾತ್ರದ ಸೋಲಾರ್ ಪೇನಲ್‌ಗಳ ಮೂಲಕ ಮನೆಯ ಚಾವಣಿಯಲ್ಲಿಯೇ ಉತ್ಪಾದಿಸ ಬಹುದಾದುದರಿಂದ ತೈಲವಾಹನದ ಬಳಕೆಯ ಬದಲಿಗೆ ವಿದ್ಯುತ್ ವಾಹನಗಳ ಬಳಕೆಯು ಬಹಳ ಅಗ್ಗ ಎನಿಸಿಬಿಡುತ್ತದೆ.
ಎಲ್ಲರಿಗೂ ವಿದ್ಯುತ್‌ಕಾರು ಗಳನ್ನು ಕೊಳ್ಳಲು ಆರ್ಥಿಕಶಕ್ತಿಯ ಕೊರತೆಯು ಎದುರಾಗಬಹುದು. ಅಂತಹವರು ತಮ್ಮ ಕಾರುಗಳನ್ನೇ ಉತ್ತಮಸ್ಥಿತಿಯಲ್ಲಿ ಇರಿಸಿಕೊಂಡು ಹೆಚ್ಚಿನ ಮೈಲೇಜನ್ನು ಪಡೆಯಬಹುದು. ಸಮಯಕ್ಕೆ ಸರಿಯಾಗಿ ಇಂಜಿನ್‌ನ ಆಯಿಲನ್ನು ಬದಲಾಯಿಸುವುದು,ಚಕ್ರಗಳ ಬೇರಿಂಗ್‌ಗಳು ಸುಲಲಿತವಾಗಿ ತಿರುಗುವಂತೆ ಗ್ರೀಸ್ ಮಾಡಿಸುವುದು,ವಾಹನದ ಚಕ್ರಗಳಲ್ಲಿ ಗಾಳಿಯ ಒತ್ತಡವು ಕಾರಿನ ಕಂಪೆನಿಯು ನಿರ್ಧರಿಸಿದ ಪ್ರಮಾಣದಲ್ಲಿ ಇರುವಂತೆ ವಾರಕ್ಕೊಮ್ಮೆಯಾದರೂ ಪರಿಶೀಲಿಸುವುದು ಮುಂತಾದುವನ್ನು ಮಾಡಬೇಕು. ಕಾರಿನ ಚಕ್ರಗಳ ಗಾಳಿಯು ಕಡಿಮೆಯಿದ್ದರೆ ಚಕ್ರ ಮತ್ತು ನೆಲದ ಘರ್ಷಣೆಯು ಹೆಚ್ಚಾಗಿ ಹೆಚ್ಚಿನ ಇಂಧನವು ಬಳಕೆಯಾಗುವುದು. ಮದುವೆಮುಂಜಿಗಳಿಗೆ ಹೋಗುವಾಗ ನಾಲ್ಕೆöÊದು ಜನರು ಒಟ್ಟಾಗಿ ಒಂದೇ ವಾಹನದಲ್ಲಿ ಹೋಗುವುದರ ಮೂಲಕ ಇಂಧನದ ಬಳಕೆಯನ್ನು ಕಡಿಮೆ ಗೊಳಿಸಬಹುದು. ರಜೆಗಳಲ್ಲಿ ವಿಹಾರಕ್ಕೆ ಹೋಗುವವರು ಇಂತಹ ವಿಹಾರಕ್ಕೆ ಸಾರ್ವಜನಿಕ ವಾಹನಗಳನ್ನು ಬಳಸಬೇಕು. ವಾಹನದ ವೇಗವನ್ನು ಸಹ ತುಸು ತಗ್ಗಿಸಿ ನಿರ್ದಿಷ್ಟವೇಗದಲ್ಲಿ ಪಯಣಿಸುವುದರಿಂದಲೂ ಇಂಧನದ ಬಳಕೆಯನ್ನು ಕಡಿಮೆಮಾಡಬಹುದು.ವಾಹನಗಳ ಸೈಲೆನ್ಸರ್ ಕೊಳವೆಯನ್ನು ಶುದ್ಧವಾಗಿರಿಸಿ ಕೊಳ್ಳುವುದರಿಂದ ವಾಹನವು ಬಳಸುವ ಇಂಧನದ ಪ್ರಮಾಣವು ಕಡಿಮೆಯಾಗುತ್ತದೆ.ವಾಹನಗಳ ವಾತಾನುಕೂಲದ ಬಳಕೆಯನ್ನು ಕಡಿಮೆಮಾಡುವುದರಿಂದಲೂ ಹೆಚ್ಚಿನ ಮೈಲೇಜನ್ನು ವಾಹನಗಳಲ್ಲಿ ಪಡೆಯಬಹುದು.
ಅತಿಯಾದ ಶಕ್ತಿಯನ್ನು ನೀಡುವ ದುಬಾರಿಕಾರುಗಳು ಹೆಚ್ಚು ಇಂಧನವನ್ನು ಬಳಸುತ್ತವೆ.ಸಿರಿವಂತರು ಅಂತಹ ಕಾರುಗಳನ್ನು ಕೊಳ್ಳುವಬದಲು ಅತಿಹೆಚ್ಚು ಮೈಲೇಜ್ ನೀಡುವಂತಹ ಕಾರನ್ನು ಬಳಕೆಮಾಡಿಯೂ ತೈಲಬೆಲೆಯೇರಿಕೆಯ ಭೀತಿಯನ್ನು ಕಡಿಮೆಮಾಡಿ ಕೊಳ್ಳ ಬಹುದು. ಬೈಕ್ ರೇಸ್, ಕಾರುಗಳ ರೇಸ್ ಮುಂತಾದ ಕ್ರೀಡೆಗಳನ್ನು ಸರಕಾರವು ಪೂರ್ಣಪ್ರಮಾಣದಲ್ಲಿ ನಿಲ್ಲಿಸುವುದು ಸಹ ಇಂಧನದ ಉಳಿತಾಯಕ್ಕೆ ತನ್ನ ಕೈಯನ್ನು ಜೋಡಿಸಿದಂತೆ ಆಗುವುದು.
ಎಲ್ಲ ಸರಕಾರೀ ಕಛೇರಿಗಳಲ್ಲಿಯೂ “ನಾಳೆ ಬನ್ನಿ, ಇಂದಾಗದು” ಎಂದು ಸಬೂಬು ಹೇಳುವುದರ ಬದಲು ಕೊಟ್ಟ ಅರ್ಜಿಯನ್ನು ಎಂದು ವಿಲೇವಾರಿ ಮಾಡಬಹುದು ಎಂದು ಬರವಣಿಗೆಯ ಮೂಲಕ ಕೊಡುವುದರಿಂದ ಪದೇಪದೇ ಕಛೇರಿಗಳಿಗೆ ಭೇಟಿಯನ್ನು ನೀಡುವುದನ್ನು ತಪ್ಪಿಸಬಹುದು. ನಿವೃತ್ತ ಸೈನಿಕರಿಗೆ ಅಗ್ಗದ ದರದಲ್ಲಿ ವಸ್ತುಗಳನ್ನು ಮಿಲಿಟರಿ ಕ್ಯಾಂಟೀನ್‌ಗಳು ಕೊಡುತ್ತಿವೆ. ಕ್ಯಾಂಟೀನ್‌ಗೆ ವಸ್ತುಗಳನ್ನು ಕೊಳ್ಳುವ ನಿವೃತ್ತ ಸೈನಿಕರಿಗೆ ಪ್ರತಿತಿಂಗಳೂ ವಸ್ತುಗಳನ್ನು ಕೊಡುವುದರಬದಲು ಎರಡು ತಿಂಗಳ “ಕೋಟಾ”ವನ್ನು ಒಂದೇ ತಿಂಗಳಿನಲ್ಲಿ ಕೊಡುವುದರಿಂದಲೂ ಅನಗತ್ಯ ವಾಹನಸಂಚಾರವನ್ನು ಕಡಿಮೆಗೊಳಿಸಬಹುದು.
ಸರಕಾರವೂ ರಸ್ತೆಗಳ ಗುಣಮಟ್ಟವನ್ನು ಉತ್ತಮಗೊಳಿಸಿಕೊಡಬೇಕು. ಗುಂಡಿಗುಡುಪುಗಳಿರುವ ರಸ್ತೆಗಳಲ್ಲಿ ಪದೇಪದೇ ಗೇರ್ ಬದಲಿಸಿಕೊಂಡು ಹೋಗಬೇಕಾಗುವುದರಿಂದ ಹೆಚ್ಚು ಇಂಧನವು ಖರ್ಚಾಗುತ್ತದೆ. ನುಣುಪಾದ ರಸ್ತೆಯಾದಲ್ಲಿ ವೇಗದ ಸ್ಥಿರತೆಯನ್ನು ಕಾಯ್ದುಕೊಂಡು ಹೋಗಬಹುದಾದುದರಿಂದ ಇಂಧನದಲ್ಲಿ ಉಳಿತಾಯವನ್ನು ಮಾಡಬಹುದು. ರಸ್ತೆಯ ದುರಸ್ಥಿಯ ಹೊಣೆಯನ್ನು ಸರಕಾರವು ಸಕಾಲದಲ್ಲಿ, ಪರಿಣಿತ ಹಾಗೂ ಪ್ರಾಮಾಣಿಕ ಗುತ್ತಿಗೆದಾರರಿಂದ ಮಾಡಿಸಿದಲ್ಲಿ ರಸ್ತೆಯ ಗುಣಮಟ್ಟವನ್ನು ದೀರ್ಘಕಾಲ ಉಳಿಸಿಕೊಳ್ಳಬಹುದು.
ಸರಕಾರವು ಇಂಧನದ ದರವನ್ನು ಸಿಕ್ಕಾಬಟ್ಟೆ ಏರಿಸಿಬಿಟ್ಟಿದೆ ಎಂದು ಕೇವಲ ಸರಕಾರವನ್ನೇ ದೂರುವ ಬದಲು ಇಂಧನದ ಬಳಕೆಯನ್ನು ನಾವು ಹೇಗೆ ಕಡಿಮೆಮಾಡಬಹುದು ಎಂದು ಕೆಲವು ನಿಮಿಷಗಳ ಕಾಲ ಯೋಚಿಸಿ ಅದನ್ನು ಕಾರ್ಯರೂಪಕ್ಕೆ ತಂದರೆ ಇಂಧನದ ಬೆಲೆಯೇರಿಕೆಯ ಹೊಡೆತವನ್ನು ಕೆಲವುಮಟ್ಟಿಗೆ ನಾವು ತಗ್ಗಿಸಬಹುದು.
-ಕಿಗ್ಗಾಲು ಎಸ್ ಗಿರೀಶ್,
ಮೂರ್ನಾಡು,
ಮೊ: ೯೧೪೧೩ ೯೫೪೨೬