ಕೋವರ್ ಕೊಲ್ಲಿ ಇಂದ್ರೇಶ್

ಬೀದರ್, ಮೇ ೨೬: ಬೀದರ್‌ನ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ೪೫ ಕೋಟಿ ರೂ. ಹಗರಣಕ್ಕೆ ಸಂಬAಧಪಟ್ಟAತೆ ಲೋಕಾಯುಕ್ತ ಪೊಲೀಸರು ಮಾಜಿ ಉಪಕುಲಪತಿ ಸೇರಿದಂತೆ ಆರು ಜನರನ್ನು ಬಂಧಿಸಿದ್ದು, ಈ ಪೈಕಿ ಕೊಡಗಿನ ಆರೋಪಿ ಕೂಡ ಒಬ್ಬರಾಗಿದ್ದಾರೆ.

ಬಂಧಿತರನ್ನು ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿ ಪ್ರೊ. ಹೆಚ್.ಡಿ. ನಾರಾಯಣಸ್ವಾಮಿ, ವಿವಿಯ ಮಾಜಿ ಹಣಕಾಸು ನಿಯಂತ್ರಣಾಧಿಕಾರಿ ಕೆ.ಎಲ್. ಸುರೇಶ್, ಸಿಬ್ಬಂದಿಗಳಾದ ಮೃತ್ಯುಂಜಯ ಹಿರೇಮಠ, ಮಂಜುನಾಥ, ರಾಮಗೊಂಡ ಹಾಗೂ ಕೊಡಗು ಮೂಲದ, ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದ ಉದ್ಯಮಿ ಎಂ.ಎA. ಬೋಪಣ್ಣ ಎಂದು ಗುರುತಿಸಲಾಗಿದೆ.

ಪಶು ವೈದ್ಯಕೀಯ, ಪಶು ಮತ್ತು ಮೀನುಗಾರಿಕಾ ವಿಶ್ವವಿದ್ಯಾಲಯದಲ್ಲಿ ೨೦೧೮ ರಿಂದ ೨೦೨೨ ರವರೆಗೆ ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆದ ಆರೋಪ ಕೇಳಿ ಬಂದಿತ್ತು. ದೂರಿನ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡಿದ್ದು ಸೆಪ್ಟೆಂಬರ್ ೧೦, ೨೦೨೫ ರಂದು ಹಗರಣದಲ್ಲಿ ಭಾಗಿಯಾಗಿದ್ದ ಆರೋಪದ ಮೇರೆಗೆ ಪಶು ಮತ್ತು ಮೀನುಗಾರಿಕಾ ವಿಶ್ವವಿದ್ಯಾಲಯದ ಸಿಬ್ಬಂದಿ ಮನೆ ಮೇಲೆ ದಾಳಿ ಮಾಡಿ ಪರಿಶೀಲನೆ ನಡೆಸಿದ್ದರು. ವಿಶ್ವವಿದ್ಯಾಲಯದ ಅಧಿಕಾರಿಗಳು ಮತ್ತು ಸಿಬ್ಬಂದಿ ಖಾಸಗಿ ವ್ಯಾಪಾರಿಗಳೊಂದಿಗೆ ಶಾಮೀಲಾಗಿ ಪೀಠೋಪಕರಣ, ಸ್ಟೇಷನರಿ ಖರೀದಿಯಲ್ಲಿ ಭಾರೀ ಅಕ್ರಮ ಎಸಗಿದ್ದುದು ನಂತರದ ತನಿಖೆ ಹಾಗೂ ವಶಪಡಿಸಿಕೊಂಡ ದಾಖಲೆಗಳಿಂದ ಬಹಿರಂಗವಾಗಿತ್ತು. ವಿಶ್ವವಿದ್ಯಾಲಯಕ್ಕೆ ವಿವಿಧ ದುಬಾರಿ ಬೆಲೆಯ ಪೀಠೋಪಕರಣಗಳು, ಸ್ಟೇಷನರಿ ವಸ್ತುಗಳನ್ನು ಒಂದಕ್ಕೆ ಮೂರು-ನಾಲ್ಕು ಪಟ್ಟು ಹೆಚ್ಚಿನ ದರದಂತೆ ಖರೀದಿ ಮಾಡಿರುವ ಬಿಲ್‌ಗಳನ್ನು ಸಲ್ಲಿಸಿ ಸರ್ಕಾರದಿಂದ ಹಣ ಪಡೆಯಲಾಗಿತ್ತು. ಆದರೆ ವಾಸ್ತವವಾಗಿ ಖರೀದಿ ಮಾಡಿದ್ದುದು ಕೇವಲ ೨-೩ ಕೋಟಿ ರೂಪಾಯಿ ಮೌಲ್ಯದ ವಸ್ತುಗಳಾಗಿದ್ದು, ಖರೀದಿಯೇ ಮಾಡದೇ ಬರೀ ಕಾಗದದಲ್ಲಿ ಮಾತ್ರ ತೋರಿಸಿ ೪೫ ಕೋಟಿ ರೂಪಾಯಿ ಮೊತ್ತವನ್ನು ಪಡೆದುಕೊಳ್ಳಲಾಗಿತ್ತು ಎಂಬ ಆರೋಪವಿದೆ.

ಹಗರಣದಲ್ಲಿ ಬೆಂಗಳೂರಿನಲ್ಲಿ ನೆಲೆಸಿರುವ ಎಂ.ಎA. ಬೋಪಣ್ಣ ಎರಡು ಕೋಟಿ ರೂಪಾಯಿ ಮೌಲ್ಯದ ವಸ್ತುಗಳನ್ನು ವಿಶ್ವವಿದ್ಯಾಲಯಕ್ಕೆ ಸರಬರಾಜು ಮಾಡಿರುವುದಾಗಿ ಬಿಲ್ ಸಲ್ಲಿಸಿ ಹಣ ಪಡೆದುಕೊಂಡಿದ್ದರು. ಆದರೆ ಲೋಕಾಯುಕ್ತ ಪೊಲೀಸರು ನಡೆಸಿದ ತನಿಖೆಯಲ್ಲಿ ತಾನು ಪಡೆದುಕೊಂಡಿದ್ದ ಹಣದಲ್ಲಿ ಶೇಕಡಾ ೧೦ ರಷ್ಟು ಕಮಿಷನ್ ಕಡಿತಗೊಳಿಸಿ ಉಳಿದ ಹಣವನ್ನು ವಾಪಸ್ ನೀಡಿದ್ದು ಬೆಳಕಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸರು ಮುಖ್ಯ ಆರೋಪಿ ಪ್ರೊಫೆಸರ್ ಹೆಚ್ ಡಿ ನಾರಾಯಣ ಸ್ವಾಮಿ ಸೇರಿದಂತೆ ಒಟ್ಟು ಆರು ಮಂದಿ ಆರೋಪಿಗಳನ್ನು ಸೋಮವಾರ ರಾತ್ರಿ ಬಂಧಿಸಿದ್ದರು. ಬಂಧಿತರನ್ನು ಇಂದು ಬೆಳಿಗ್ಗೆ ಲೋಕಾಯುಕ್ತ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಲಯ ಎಲ್ಲರಿಗೂ ೧೪ ದಿನಗಳ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದೆ.