ಮಡಿಕೇರಿ, ಮೇ ೨೬; ಮಡಿಕೇರಿ ನಗರಸಭೆಯಲ್ಲಿ ಬಿಜೆಪಿ ಆಡಳಿತ ಚುಕ್ಕಾಣಿ ಹಿಡಿದು ೪ ವರ್ಷಗಳೇ ಕಳೆದರೂ ಯಾವದೇ ಅಭಿವೃದ್ಧಿ ಕೆಲಸಗಳಾಗಿಲ್ಲವೆಂದು ಆರೋಪಿಸಿ ಮಡಿಕೇರಿ ನಗರ ಕಾಂಗ್ರೆಸ್ ಸಮಿತಿ ವತಿಯಿಂದ ನಗರ ಸಭಾ ಕಚೇರಿ ಎದುರು ಪ್ರತಿಭಟನೆ ನಡೆಯಿತು.
ಗಣಪತಿ ಬೀದಿಯಲ್ಲಿರುವ ಕಾಂಗ್ರೆಸ್ ಕಚೇರಿಯಿಂದ ಮೆರವಣಿಗೆ ಮೂಲಕ ಸಾಗಿದ ಕಾಂಗ್ರೆಸ್ ಕಾರ್ಯಕರ್ತರು ನಗರಸಭಾ ಕಚೇರಿ ಎದುರು ಜಮಾವಣೆಗೊಂಡರು. ಮೆರವಣಿಗೆಯುದ್ದಕ್ಕೂ ನಗರಸಭಾ ಆಡಳಿತದಲ್ಲಿರುವ ಬಿಜೆಪಿ ಸದಸ್ಯರುಗಳ ವಿರುದ್ಧ ಘೋಷಣೆಗಳನ್ನು ಕೂಗಿದರು.
ಬಳಿಕ ನಗರಸಭಾ ಕಚೇರಿ ಎದುರು ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಟಿ.ಪಿ.ರಮೇಶ್; ನಗರದಲ್ಲಿ ಆಡಳಿತದಲ್ಲಿರುವ ಬಿಜೆಪಿ ಪಕ್ಷ ಆಡಳಿತದಲ್ಲಿ ವಿಫಲವಾಗಿದೆ. ಬಡವರಿಗೆ ನಿವೇಶನ ನೀಡಿಲ್ಲ, ಒಳ ರಸ್ತೆಗಳ ಕಾಮಗಾರಿ ಆಗಿಲ್ಲ, ತಡೆಗೋಡೆ ನಿರ್ಮಾಣ ಕಾರ್ಯ ಆಗಿಲ್ಲ, ರಾಜ ಕಾಲುವೆ, ತೋಡುಗಳ ಹೂಳೆತ್ತುವ, ದುರಸ್ತಿ ಕಾರ್ಯ ಆಗಿಲ್ಲ, ಬೀದಿ ನಾಯಿಗಳ ಹಾವಳಿ ನಿಯಂತ್ರಣಕ್ಕೆ ಕ್ರಮ ಕೈಗೊಂಡಿಲ್ಲ. ಜಲಜೀವನ್ ಕಾಮಗಾರಿಯಿಂದಾಗಿ ರಸ್ತೆಗಳು ಗುಂಡಿ ಬಿದ್ದಿದ್ದು, ಇದನ್ನು ಸರಿಪಡಿಸುವಲ್ಲಿ ಸದಸ್ಯರುಗಳು ವಿಫಲರಾಗಿದ್ದಾರೆ. ಕಸ ವಿಲೇವಾರಿ ಸಮರ್ಪಕವಾಗಿ ಆಗುತ್ತಿಲ್ಲ, ಕಚೇರಿಯಲ್ಲಿ ಫಾರಂ-೩ ಸೇರಿದಂತೆ ಸಾರ್ವಜನಿಕರ ಯಾವದೇ ಕೆಲಸಗಳಾಗುತ್ತಿಲ್ಲ. ಬೀದಿ ದೀಪಗಳ ನಿರ್ವಹಣೆ ಸರಿಯಾಗಿ ಆಗುತ್ತಿಲ್ಲ ಎಂದು ಆರೋಪಿಸಿದರು. ಈ ಹಿನ್ನೆಲೆಯಲ್ಲಿ ನಗರಸಭಾ ಅಧ್ಯಕ್ಷರಾದಿಯಾಗಿ ಆಡಳಿತದಲ್ಲಿರುವ ಬಿಜೆಪಿ ಸದಸ್ಯರುಗಳು ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು.
ಅಭಿವೃದ್ಧಿ ಸಮಿತಿ ಬೆಂಬಲ
ಕಾAಗ್ರೆಸ್ ಪಕ್ಷದ ಪ್ರತಿಭಟನೆಗೆ ಕೊಡಗು ಅಭಿವೃದ್ಧಿ ಸಮಿತಿ ಪದಾಧಿಕಾರಿಗಳು ಬೆಂಬಲ ನೀಡಿದರು. ಕಾಂಗ್ರೆಸ್ ಕಾರ್ಯಕರ್ತರು ಮೆರವಣಿಗೆಯಲ್ಲಿ ಸಾಗಿ ಬರುತ್ತಿದ್ದಂತೆ ನಗರಸಭಾ ಕಚೇರಿ ಎದುರು ನೆರೆದಿದ್ದ ಅಭಿವೃದ್ಧಿ ಸಮಿತಿಯವರು ಅವರ ಸಮಿತಿ ಪರ ಘೋಷಣೆ ಕೂಗುತ್ತಾ ಮೆರವಣಿಗೆಯಲ್ಲಿ ಸೇರಿಕೊಂಡರು. ಪ್ರತಿಭಟನೆ ವೇಳೆ ಅಭಿವೃದ್ಧಿ ಸಮಿತಿ ಅಧ್ಯಕ್ಷನೆಂದು ಹೇಳಿಕೊಳ್ಳುತ್ತಿರುವ ಪ್ರಸನ್ನ ಭಟ್ ಮಾತನಾಡಲು ಮುಂದಾದಾಗ ಮಧ್ಯ ಪ್ರವೇಶಿಸಿದ ಕಾಂಗ್ರೆಸ್‌ನ ಹಿರಿಯರಾದ ಟಿ.ಪಿ.ರಮೇಶ್; ‘ಇದು ಪಕ್ಷದ ಹೋರಾಟವಾಗಿದ್ದು ನಿಮಗೆ ಮಾತನಾಡಲು ಅವಕಾಶವಿಲ್ಲ, ಬೆಂಬಲ ನೀಡುವದಾದರೆ ನೀಡಿ’ ಎಂದು ಹೇಳಿದರು. ಬಳಿಕ ಪ್ರಸನ್ನ ಭಟ್ ಪ್ರತಿಭಟನೆಗೆ ಸಮಿತಿಯಿಂದ ಬೆಂಬಲ ನೀಡುವದಾಗಿ ಹೇಳಿದರು.
ಈ ಸಂದರ್ಭ ಮನವಿ ಪತ್ರವನ್ನು ನಗರಸಭಾ ಪೌರಾಯುಕ್ತ ರಮೇಶ್ ಅವರಿಗೆ ಪ್ರತಿಭಟನಾಕಾರರು ನೀಡಿದರು. ನಗರ ಕಾಂಗ್ರೆಸ್ ಅಧ್ಯಕ್ಷ ಪ್ರಕಾಶ್ ಆಚಾರ್ಯ ಮುಂದಾಳತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ನಗರ ಸಭಾ ಸದಸ್ಯ, ಮುಡಾ ಅಧ್ಯಕ್ಷ ರಾಜೇಶ್ ಯಲ್ಲಪ್ಪ, ನಗರಸಭಾ ನಾಮನಿರ್ದೇಶಿತ ಸದಸ್ಯರುಗಳಾದ ಸದಾ ಮುದ್ದಪ್ಪ, ಮುದ್ದುರಾಜ್, ಯಾಕೂಬ್, ಜುಲೇಕಾಬಿ, ಜಗದೀಶ್, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಕೋಚನ ಚೇತನ್, ಸಂಪತ್‌ರಾಜ್, ಉಪಾಧ್ಯಕ್ಷರಾದ ಮುನೀರ್ ಮಾಚಾರ್, ಮಂಜುನಾಥ್, ಮುಡಾ ಸದಸ್ಯೆ ಮಿನಾಝ್ ಪ್ರವೀಣ್, ಓಂಕಾರೇಶ್ವರ ದೇವಾಲಯ ಸಮಿತಿ ಸದಸ್ಯರುಗಳಾದ ವೀಣಾಕ್ಷಿ, ವಿಶಾಲ್ ನಂದಕುಮಾರ್, ಪಕ್ಷದ ಕಾರ್ಮಿಕ ವಿಭಾಗದ ಅಧ್ಯಕ್ಷ ದಿನೇಶ್ ಶೆಟ್ಟಿ, ಗ್ಯಾರಂಟಿ ಸಮಿತಿ ಸದಸ್ಯೆ ಫ್ಯಾನ್ಸಿ ಬೆಳ್ಯಪ್ಪ, ಪಕ್ಷದ ಪ್ರಮುಖರುಗಳಾದ ಜಯಂತಿ ಶೆಟ್ಟಿ, ಟಿ.ಹೆಚ್. ಉದಯಕುಮಾರ್, ಮಂಜುನಾಥ್, ಗೋಪಿನಾಥ್, ಲೀಲ ಶೇಷಮ್ಮ, ರೇವತಿ ರಮೇಶ್, ರಾಜು, ಕೊಡಗು ಅಭಿವೃದ್ಧಿ ಸಮಿತಿಯ ನಗರಾಧ್ಯಕ್ಷ ಉಮೇಶ್‌ಕುಮಾರ್ ಸೇರಿದಂತೆ ಪ್ರಮುಖರು ಪಾಲ್ಗೊಂಡಿದ್ದರು.