ಗೋಣಿಕೊಪ್ಪಲು, ಮೇ ೨೭: ಮುಂಬರುವ ಮಳೆಗಾಲದಲ್ಲಿ ಅತಿವೃಷ್ಟಿ ಆತಂಕ ಎದುರಾಗುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡ ಗೋಣಿಕೊಪ್ಪ ಗ್ರಾಮ ಪಂಚಾಯಿತಿಯು ನಗರದ ಪ್ರಮುಖ ಕೀರೆಹೊಳೆಯಲ್ಲಿದ್ದ ಕಸ ಕಡ್ಡಿಗಳನ್ನು ಹೊರ ತೆಗೆಯುವ ಮೂಲಕ ನೀರು ಸರಾಗವಾಗಿ ಹರಿಯುವಂತೆ ಕೀರೆಹೊಳೆಯನ್ನು ಶುದ್ಧೀಕರಣಗೊಳಿಸಿದೆ.

ಇದರಿಂದಾಗಿ ಮಳೆಗಾಲದಲ್ಲಿ ಮುಂದಾಗಬಹುದಾದ ಅನಾಹುತವನ್ನು ತಪ್ಪಿಸಲು ಸಹಕಾರಿಯಾಗಿದೆ. ಕಳೆದ ಒಂದು ವಾರದಿಂದ ೨ ಜೆಸಿಬಿ ಯಂತ್ರಗಳ ಸಹಾಯದಿಂದ ಕೀರೆಹೊಳೆಯಲ್ಲಿದ್ದ ಹೂಳನ್ನು ಮೇಲೆತ್ತಲಾಗಿದೆ. ಹೊಳೆಯನ್ನು ಕೊಂಚಮಟ್ಟಿಗೆ ಅಗಲೀಕರಣ ಮಾಡಲಾಗಿದೆ. ಬೈಪಾಸ್‌ನಲ್ಲಿರುವ ಕೈತೋಡನ್ನು ಕೂಡ ಶುದ್ಧೀಕರಣಗೊಳಿಸಿದ್ದು, ರಭಸದಿಂದ ಬರುವ ಮಳೆ ನೀರನ್ನು ಸಲೀಸಾಗಿ ಹರಿಯುವಂತೆ ಮಾಡಿದ್ದಾರೆ. ಹೊಳೆಬದಿಯಲ್ಲಿರುವ ಸುತ್ತಮುತ್ತಲಿನ ಬಡಾವಣೆಯ ನಿವಾಸಿಗಳು ಗ್ರಾಮ ಪಂಚಾಯಿತಿಯ ಕಾರ್ಯವನ್ನು ಶ್ಲಾಘಿಸಿದ್ದಾರೆ.