ಸುಂಟಿಕೊಪ್ಪ, ಮೇ ೨೭: ಕಾರ್ಮಿಕರಿಗೆ ಶೇ. ೧೦೦ ರಷ್ಟು ಕನಿಷ್ಟ ವೈಜ್ಞಾನಿಕ ವೇತನ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ತಾ. ೩೦ ರಂದು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘ ಸಿಐಟಿಯು ಸಂಯೋಜಿತ ಸಂಘಟನೆಯ ಪ್ರಮುಖ ಪಿ.ಆರ್. ಭರತ್ ತಿಳಿಸಿದ್ದಾರೆ.

ಇಲ್ಲಿನ ಗ್ರಾಮ ಪಂಚಾಯಿತಿ ಮುಂಭಾಗದಲ್ಲಿ ಸಾಂಕೇತಿಕವಾಗಿ ಧರಣಿ ನಡೆಸಿದ ಸಂದರ್ಭ ಮಾತನಾಡಿದ ಸರ್ಕಾರ ಶೇ.೬೦ರಷ್ಟು ಕಾರ್ಮಿಕರಿಗೆ ವೇತನ ಹೆಚ್ಚಳ ಮಾಡಿರುವ ಆದೇಶದ ಮೇರೆ ಮಾಲೀಕರು, ಗುತ್ತಿಗೆದಾರರು ನ್ಯಾಯಾಲಯದಿಂದ ತಡೆಯಾಜ್ಞೆ ತಂದು ಕಾರ್ಮಿಕರಿಗೆ ಅನ್ಯಾಯ ಮಾಡಲು ಸರ್ಕಾರ ದಾರಿ ಮಾಡಿಕೊಡಬಾರದೆಂದು ಆಗ್ರಹಿಸಿದರು.

ಅವರು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನಾಲ್ಕು ಸಂಹಿತೆಗಳು ಕಾರ್ಮಿಕರಿಗೆ ಅಪಾಯಕಾರಿಯಾಗಿದೆ. ಆದ್ದರಿಂದ ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ಈ ನಾಲ್ಕು ಸಂಹಿತೆಗಳನ್ನು ಜಾರಿಗೆ ತರಬಾರದು ಎಂದು ಬೇಡಿಕೆ ಇಟ್ಟುಕೊಂಡು ತಾ. ೩೦ ರಂದು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟಿಸಿ ಮನವಿ ಸಲ್ಲಿಸಲಾಗುವುದೆಂದರು.

ಧರಣಿ ವೇಳೆ, ವಿಶ್ವ ರಂಗಸ್ವಾಮಿ, ಗಾಯತ್ರಿ, ಮಣಿಕಂಠ, ಮುನಿಸ್ವಾಮಿ, ರಾಮಚಂದ್ರ, ವಿಶ್ವ, ರವಿ, ರಾಜ, ಮುರುಗೇಶ್, ರಮೇಶ, ಸಣ್ಣ, ಚಂದ್ರ ಮಣಿ, ಸಂದ್ಯಾ, ಶ್ರೀನಿವಾಸ್ ಉಪಸ್ಥಿತರಿದ್ದರು.