ಬೆಂಗಳೂರು, ಮೇ ೨೭: ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಸಭೆಗೆ ಗೈರು ಹಾಜರಾದ ಕೆಪಿಸಿಸಿ ಪದಾಧಿಕಾರಿಗಳ ವಿರುದ್ಧ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕಠಿಣ ಕ್ರಮ ಕೈಗೊಂಡು ಚುರುಕು ಮುಟ್ಟಿಸಿದ್ದಾರೆ.
ಕೆಪಿಸಿಸಿಯ ಮೂವರು ಉಪಾಧ್ಯಕ್ಷರುಗಳಾದ ದಾವಣಗೆರೆಯ ಕೆ. ಶಿವಮೂರ್ತಿ, ಕಲಬುರ್ಗಿಯ ಬಾಬುರಾವ್ ಜಾಗೀರ್ ದಾರ್, ಬೆಂಗಳೂರಿನ ಎಂ ಸಿ ವೇಣುಗೋಪಾಲ್ ಅಲ್ಲದೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾಗಿದ್ದ, ಕೊಡಗು ಜಿ.ಪಂ. ಮಾಜಿ ಅಧ್ಯಕ್ಷೆ ಕೆ.ಪಿ. ಚಂದ್ರಕಲಾ ಸಹಿತ ೨೯ ಮಂದಿಯನ್ನು ಪ್ರಧಾನ ಕಾರ್ಯದರ್ಶಿ ಸ್ಥಾನದಿಂದ ವಜಾ ಮಾಡಿದ್ದಾರೆ. ಪಕ್ಷದ ಸಭೆಗೆ ಗೈರಾಗಿರುವ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡು ಕ್ರಮ ಕೈಗೊಳ್ಳುವಂತೆ ಕರ್ನಾಟಕ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರು ಸೂಚಿಸಿದ್ದರು. ಈ ಸೂಚನೆ ಬೆನ್ನಲ್ಲೇ ಕೆಪಿಸಿಸಿ ಅಧ್ಯಕ್ಷರು ಕ್ರಮ ಕೈಗೊಂಡಿದ್ದಾರೆ. ಎಲ್ಲ ೩೧ ನಾಯಕರನ್ನೂ ತಕ್ಷಣವೇ ಪಕ್ಷದ ಹುದ್ದೆಯಿಂದ ಕೈ ಬಿಡಲಾಗಿದೆ ಎಂದು ಆದೇಶದಲ್ಲಿ ಉಲ್ಲೇಖಿಸಿದ್ದಾರೆ.
- ಇಂದ್ರೇಶ್