ಸಿದ್ದಾಪುರ, ಮೇ ೨೭: ಕಾಡಾನೆ ದಾಳಿಗೆ ಸಿಲುಕಿ ಬೆಳೆಗಾರರೊಬ್ಬರು ಗಂಭೀರ ಗಾಯಗೊಂಡು ಪ್ರಾಣಪಾಯದಿಂದ ಪಾರಾದ ಘಟನೆ ಅಭ್ಯತ್ಮಂಗಲ ಗ್ರಾಮದ ಒಂಟಿಯAಗಡಿಯಲ್ಲಿ ನಡೆದಿದೆ.
ಅಭ್ಯತ್ಮಂಗಲ ಗ್ರಾಮದ ನಿವಾಸಿ ಕಾಫಿ ಬೆಳೆಗಾರ ಅಂಚೆಮನೆ ಸುಧ ಕುಮಾರ್ (೫೫) ಎಂಬವರು ತಮ್ಮ ಮನೆಯ ಬಳಿ ನಡೆದುಕೊಂಡು ಹೋಗುತ್ತಿದ್ದಾಗ ರಾತ್ರಿ ಸಮಯದಲ್ಲಿ ಏಕಾಏಕಿ ಕಾಡಾನೆಯು ಸುಧ ಕುಮಾರ್ ಮೇಲೆ ದಾಳಿ ನಡೆಸಿದೆ.
ಪರಿಣಾಮ ಅವರ ಬೆನ್ನಿಗೆ ಹಾಗೂ ಕಾಲಿಗೆ ಗಂಭೀರ ಗಾಯವಾಗಿದ್ದು, ಈ ಸಂದರ್ಭ ಅವರು ಕಿರಿಚಿಕೊಂಡಾಗ ಅವರ ಸಂಬAಧಿಕರು ಕೂಡಲೇ ಆಗಮಿಸಿ, ಗಾಯಾಳು ಸುಧ ಕುಮಾರ್ ಅವರನ್ನು ಅಮ್ಮತ್ತಿಯ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದರು.
ಕಾಡಾನೆ ದಾಳಿಯ ಬಗ್ಗೆ ಅವರ ಕುಟುಂಬಸ್ಥರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ ಮೇರೆಗೆ ಸ್ಥಳಕ್ಕೆ ಮೀನುಕೊಲ್ಲಿ ಶಾಖೆಯ ಉಪವಲಯ ಅರಣ್ಯ ಅಧಿಕಾರಿ ಸಚಿನ್ ನಿಂಬಾಳ್ಕರ್ ಹಾಗೂ ಸಿಬ್ಬಂದಿ ಭೇಟಿ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಡಿಕೇರಿಯ ಜಿಲ್ಲಾ ಆಸ್ಪತ್ರೆಗೆ ರವಾನಿಸಿದರು. ಘಟನೆ ಬಗ್ಗೆ ತಿಳಿದು ಜಿಲ್ಲಾಸ್ಪತ್ರೆಗೆ ಸೋಮವಾರಪೇಟೆ ತಾಲೂಕು ಎ.ಸಿ.ಎಫ್. ಗೋಪಾಲ್ ಮತ್ತು ಕುಶಾಲನಗರ ವಲಯ ಅರಣ್ಯ ಅಧಿಕಾರಿ ರಕ್ಷಿತ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಲ್ಲದೆ ವೈದ್ಯಾಧಿಕಾರಿಗಳು ಜೊತೆ ಮಾತನಾಡಿ ಉತ್ತಮ ಚಿಕಿತ್ಸೆ ನೀಡುವಂತೆ ತಿಳಿಸಿದರು.
ಕಾಡಾನೆ ದಾಳಿ ನಡೆಸಿದ ಹಿನ್ನೆಲೆಯಲ್ಲಿ ಅಭ್ಯತ್ಮಂಗಲ, ಕಾಟಿಬಾಣೆ, ಅರೆಕಾಡು ಗ್ರಾಮದ ಕಾಫಿ ತೋಟದೊಳಗೆ ಬೀಡುಬಿಟ್ಟಿರುವ ಕಾಡಾನೆಗಳನ್ನು ಕಾಡಿಗಟ್ಟುವ ಕಾರ್ಯಾಚರಣೆಯನ್ನು ಎ.ಸಿಎಫ್. ಗೋಪಾಲ್.ಎ.ಎ. ಹಾಗೂ ವಲಯ ಅರಣ್ಯ ಅಧಿಕಾರಿ ರಕ್ಷಿತ್ ಮಾರ್ಗದರ್ಶನದಲ್ಲಿ ಉಪವಲಯ ಅರಣ್ಯ ಅಧಿಕಾರಿ ಸಚಿನ್ ನೇತೃತ್ವದಲ್ಲಿ ಸಿಬ್ಬಂದಿಗಳು ನಡೆಸಿದರು.