ವೀರಾಜಪೇಟೆ, ಮೇ ೨೮: ರೋಟರಿ ಕ್ಲಬ್ ವೀರಾಜಪೇಟೆ ಮತ್ತು ಕೊಡಗು ಜಿಲ್ಲಾ ಹಾಪ್ಕಾಮ್ಸ್ ಜಂಟಿ ಆಶ್ರಯದಲ್ಲಿ ನಗರದ ತಾಲೂಕು ಮೈದಾನದ ಆವರಣದಲ್ಲಿ ಮೂರು ದಿನಗಳ ಕಾಲ ನಡೆಯುವ ಮಾವು ಮೇಳಕ್ಕೆ ಇಂದು ಚಾಲನೆ ದೊರಕಿತು.
ಈ ಮಾವು ಮೇಳದಲ್ಲಿ ನೈಸರ್ಗಿಕವಾಗಿ ಹಣ್ಣಾಗಿಸಿರುವ ಹಣ್ಣು ಮಾತ್ರ ಮಾರಾಟವಾಗುತ್ತಿದೆ. ಕನಕಪುರದಿಂದ ಆಗಮಿಸಿರುವ ರೈತರು ಇಲ್ಲಿ ಹಣ್ಣು ಮಾರಾಟ ಮಾಡುತ್ತಿದ್ದಾರೆ. ತಾ. ೩೦ ರವರೆಗೆ ಈ ಮೇಳ ಇರಲಿದೆ. ಬಿರುಬಿಸಿಲ ಮಧ್ಯೆಯೂ ಮಾವು ಮೇಳಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಗ್ರಾಹಕರು ಉತ್ಸಾಹದಲ್ಲಿ ಮುಗಿಬಿದ್ದು ಖರೀದಿಯಲ್ಲಿ ತೊಡಗಿದ್ದು ಕಂಡು ಬಂತು.
ರಾಮನಗರ ಜಿಲ್ಲೆಯ ಕನಕಪುರದ ಈ ರೈತರು ನೈಸರ್ಗಿಕ ವಿಧಾನದಲ್ಲಿ ಯಾವುದೇ ಕಾರ್ಬೆÊಡ್ ರಾಸಾಯನಿಕ ಬಳಸದೆ ಮಾವಿನ ಕಾಯಿಯನ್ನು ಹಣ್ಣಾಗಿಸುತ್ತಾರೆ. ಕೊಯ್ದ ಕಾಯಿಗಳನ್ನು ಮಣ್ಣಿನ ಮನೆಯಲ್ಲಿ ಮುಚ್ಚಿರಿಸುತ್ತಾರೆ. ಆಗ ಬೆಚ್ಚಗಿನ ವಾತಾವರಣದಲ್ಲಿ ಮಾವು ನೈಸರ್ಗಿಕವಾಗಿ ಹಣ್ಣಾಗುತ್ತದೆ. ಹಾಗೆ ಹಣ್ಣಾಗುವ ಮಾವಿನ ರುಚಿ ಸಿಹಿ ಇರುತ್ತದೆ, ಅಲ್ಲದೆ ಬಣ್ಣ ಸಹಜವಾಗಿ ಕಾಣುತ್ತದೆ, ಹಣ್ಣುಗಳ ಬಣ್ಣ ಬೇರೆ ಬೇರೆ ರೀತಿ ಇರುತ್ತದೆ ಎಂದು ರೈತರು ಮಾಹಿತಿ ಇತ್ತರು.
ಮೇಳದಲ್ಲಿ ವಿವಿಧ ತಳಿಗಳಾದ ಅಲ್ಫೋನ್ಸ್ಸೊ, ಬಾದಾಮ್, ಮಲ್ಲಿಕಾ, ರಸಪುರಿ, ಮಲಗೋಬಾ, ಸಿಂಧೂರ(ಬಾದಾಮಿ), ಕಾಳಪಾಡಿ, ತೋತಾಪುರಿ, ಬೆಂಗನ್ಪಲ್ಲಿ, ಶುಗರ್ ಬೇಬಿ ಇತ್ಯಾದಿ ಮಾರಾಟವಾಗುತ್ತಿವೆ. ಅಲ್ಲದೆ ವಿಶೇಷವೆಂದರೆ ಕೆಲವೊಂದು ವಿಶೇಷ ಮಾವಿನ ತಳಿಗಳನ್ನು ಪ್ರದರ್ಶನಕ್ಕೆ ಕೂಡ ಇರಿಸಲಾಗಿದ್ದು, ಜನ ನೋಡಿ ಖುಷಿ ಪಡುತ್ತಿದ್ದಾರೆ.
ಒಟ್ಟಿನಲ್ಲಿ ಉತ್ತಮ ದರದಲ್ಲಿ ಮಾವಿನಹಣ್ಣು ಲಭ್ಯವಾಗುತ್ತಿದ್ದು, ವೀರಾಜಪೇಟೆ ಜನತೆ ಹಣ್ಣುಗಳ ರಾಜನ ಖರೀದಿಸಲು ಮುಗಿಬೀಳುತ್ತಿದ್ದಾರೆ.
ಮಾವು ಮೇಳಕ್ಕೆ ಚಾಲನೆ
ನೈರ್ಸಗಿಕವಾದ ರಾಸಾಯಿನಿಕ ಮುಕ್ತವಾದ ಮಾವಿನ ಹಣ್ಣುಗಳನ್ನು ವೀರಾಜಪೇಟೆಯಲ್ಲಿ ಮಡಿಕೇರಿಯ ಹಾಪ್ಕಾಮ್ಸ್ ಸಂಸ್ಥೆ ವತಿಯಿಂದ ಮಾರಾಟ ವ್ಯವಸ್ಥೆ ಮಾಡಲಾಗಿದ್ದು ಇದನ್ನು ಸ್ಥಳೀಯರು ಸದುಪಯೋಗ ಪಡಿಸಿಕೊಳ್ಳುವಂತೆ ವಿಧಾನ ಪರಿಷತ್ ಸದಸ್ಯರಾದ ಮಂಡೇಪAಡ ಸುಜಾ ಕುಶಾಲಪ್ಪ ಹೇಳಿದರು.
ಮಾವು ಮೇಳವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಡಿಕೇರಿಯಲ್ಲಿ ಕಳೆದ ೬ ವರ್ಷಗಳಿಂದ ಈ ಮೇಳವನ್ನು ಯಶಸ್ವಿಯಾಗಿ ಆಯೋಜಿಸಲಾಗುತ್ತಿದ್ದು ಜನರ ಉತ್ತಮ ಪ್ರತಿಕ್ರಿಯೆ ಇದಕ್ಕೆ ಲಭ್ಯವಾಗುತ್ತಿದೆ. ಅದೇ ರೀತಿ ವೀರಾಜಪೇಟೆಯ ಜನರಿಗೂ ಈ ವ್ಯವಸ್ಥೆ ಮಾಡಬೇಕೆಂದು ಒತ್ತಾಯ ಇತ್ತು.
ಆ ಕಾರಣದಿಂದ ಈ ಮೇಳ ಆಯೋಜನೆ ಮಾಡಿ ಇಲ್ಲಿಯ ಜನರಿಗೂ ನೈರ್ಸಗಿಕವಾದ ಮಾವಿನ ಹಣ್ಣಿನ ಸವಿ ಉಣಬಡಿಸಲು ಈ ಮೇಳ ಆಯೋಜಿಸಲಾಗಿದೆ ಎಂದು ಸುಜಾ ಕುಶಾಲಪ್ಪ ಹೇಳಿದರು.
ಜಿಲ್ಲಾ ಹಾಪ್ಕಾಮ್ಸ್ನ ಅಧ್ಯಕ್ಷ ರಮೇಶ್ ಚಂಗಪ್ಪ ಮಾತನಾಡಿ, ಸ್ಥಳೀಯ ರೋಟರಿ ಸಂಸ್ಥೆಯ ಸಹಕಾರದಲ್ಲಿ ಇಂದು ಮೇಳ ಆರಂಭವಾಗಿದ್ದು ಇಲ್ಲಿನ ಜನರು ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದರು.
ಈ ಸಂದರ್ಭ ರೋಟರಿ ಸಂಸ್ಥೆಯ ಅಧ್ಯಕ್ಷ ಬಲ್ಲಿಮಾಡ ಮಾದಪ್ಪ, ವೀರಾಜಪೇಟೆ ಮಂಡಲ ಬಿಜೆಪಿ ಅಧ್ಯಕ್ಷ ಮಾಚಿಮಂಡ ಸುವಿನ್ ಗಣಪತಿ, ಜಿಲ್ಲಾ ಉಪಾಧ್ಯಕ್ಷ ಕಿಲನ್, ಪಾಲಿಬೆಟ್ಟ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕುಟ್ಟಂಡ ಅಜಿತ್ ಕರುಂಬಯ್ಯ, ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಅಧ್ಯಕ್ಷ ಬಾಂಡ್ ಗಣಪತಿ, ಕೊಡಗು ಜಿಲ್ಲಾ ಹಾಪ್ಕಾಮ್ಸ್ನ ಕಾರ್ಯನಿರ್ವಹಣಾ ಅಧಿಕಾರಿ ರೇಷ್ಮ ಗಿರೀಶ್, ಪ್ರಮುಖರಾದ ಮಧು ದೇವಯ್ಯ, ಪಟ್ರಪಂಡ ರಘು ನಾಣಯ್ಯ, ಕೋಲತಂಡ ಬೋಪಯ್ಯ, ಹಿರಿಯ ವಕೀಲ ಬಿ.ಆರ್ ರತ್ನಾಕರ ಶೆಟ್ಟಿ, ಶಶಿ ಸುಬ್ರಮಣಿ, ಬಿ.ಜೆ. ಬೋಪಣ್ಣ, ಸಂಪಿ ಪೂಣಚ್ಚ ಮತ್ತು ಕನಕಪುರದ ಮಾವು ಬೆಳೆಗಾರರಾದ ಮಂಜು ಮತ್ತಿತರರು ಉಪಸ್ಥಿತರಿದ್ದರು.