ಕುಶಾಲನಗರ, ಮೇ ೨೮: ಕುಶಾಲನಗರ ತಾಲೂಕು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ವತಿಯಿಂದ ತಾ. ೩೦ ರಂದು ೬ನೇ ವರ್ಷದ ಶ್ರೀ ಬಸವ ಜಯಂತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಮಹಾಸಭಾದ ತಾಲೂಕು ಘಟಕದ ಅಧ್ಯಕ್ಷ ಹೆಚ್.ಎಂ. ಮಧುಸೂದನ್ ತಿಳಿಸಿದರು.

ಕುಶಾಲನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಸಂಜೆ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಬಸವ ಜಯಂತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ೪ ಗಂಟೆಗೆ ಬೈಚನಹಳ್ಳಿ ಶ್ರೀ ಮಾರಮ್ಮ ದೇವಾಲಯದಿಂದ ಸಭಾಂಗಣದವರೆಗೆ ಮೆರವಣಿಗೆ ನಡೆಯಲಿದೆ.

ತೊರೆನೂರು ವಿರಕ್ತ ಮಠದ ಶ್ರೀ ಮಲ್ಲೇಶ ಸ್ವಾಮೀಜಿಯ ದಿವ್ಯ ಸಾನಿಧ್ಯದಲ್ಲಿ ನಡೆಯುವ ಸಭಾ ಕಾರ್ಯಕ್ರಮವನ್ನು ಮಹಾಸಭಾದ ರಾಜ್ಯಾಧ್ಯಕ್ಷ ಡಾ. ಶಂಕರ ಮಹದೇವ ಬಿದರಿ ಉದ್ಘಾಟಿಸಲಿದ್ದಾರೆ.

ಮಹಾಸಭಾದ ಕುಶಾಲನಗರ ತಾಲೂಕು ಘಟಕದ ಅಧ್ಯಕ್ಷ ಹೆಚ್.ಎಂ. ಮಧುಸೂದನ್ ಅಧ್ಯಕ್ಷತೆ ವಹಿಸಲಿದ್ದಾರೆ.

ಕೊಡ್ಲಿಪೇಟೆ ಕಿರಿಕೊಡ್ಲಿ ಮಠಾಧೀಶರಾದ ಶ್ರೀ ಸದಾಶಿವ ಸ್ವಾಮೀಜಿ ಆಶಯ ನುಡಿಗಳಾಡಲಿದ್ದಾರೆ. ಮೈಸೂರಿನ ಬಸವಜ್ಞಾನ ಮಂದಿರದ ಪೀಠಾಧ್ಯಕ್ಷೆ ಮಾತೆ ಬಸವಾಂಜಲಿದೇವಿ ಉಪನ್ಯಾಸ ನೀಡಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಮಹಾಸಭಾ ಕೊಡಗು ಜಿಲ್ಲಾ ಘಟಕ ಅಧ್ಯಕ್ಷ ಹೆಚ್.ವಿ. ಶಿವಪ್ಪ, ಪೊಲೀಸ್ ಉಪ ಅಧೀಕ್ಷಕ ಪಿ. ಚಂದ್ರಶೇಖರ್ ಸೇರಿದಂತೆ ವಿವಿಧ ಮಠಾಧಿಪತಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.

ಗೋಷ್ಠಿಯಲ್ಲಿ ಘಟಕದ ಪ್ರಧಾನ ಕಾರ್ಯದರ್ಶಿ ಶುಭಶೇಖರ್, ಸಂಘಟನಾ ಕಾರ್ಯದರ್ಶಿ ಎಸ್. ಧರ್ಮೇಂದ್ರ, ಕಾರ್ಯದರ್ಶಿ ಷಣ್ಮುಖ, ನಿರ್ದೇಶಕ ಜೆ.ಎಸ್. ಉದಯಕುಮಾರ್ ಇದ್ದರು.