ಶನಿವಾರಸAತೆ, ಮೇ ೩೧: ಪಟ್ಟಣದ ಗುಂಡೂರಾವ್ ಬಡಾವಣೆಯ ಬಾಪೂಜಿ ವಿದ್ಯಾಸಂಸ್ಥೆ ಸಮೀಪದ ಶ್ರೀವೀರಪಂಚಮ ಶನೇಶ್ವರ ದೇವಸ್ಥಾನ ಆಡಳಿತ ಮಂಡಳಿ ವತಿಯಿಂದ ದೇವಸ್ಥಾನದಲ್ಲಿ ಶ್ರೀದುರ್ಗಾ ಪರಮೇಶ್ವರಿ, ಏಳು ನಾಲಿಗೆ ದುರ್ಗಿ, ಹಾಗೂ ಹುಲಿ ಮುಖದ ಚೌಡೇಶ್ವರಿ ದೇವಿಗೆ ಪೂಜಾ ಕೈಂಕರ್ಯ ಶ್ರದ್ಧಾಭಕ್ತಿಯಿಂದ ನೆರವೇರಿತು.

ಬೆಳಿಗ್ಗೆ ಪ್ರಧಾನ ಅರ್ಚಕ ಲೋಕೇಶ್ ಮತ್ತು ತಂಡದವರು ಗಂಗಾ ಪೂಜೆ ನೆರವೇರಿಸಿ, ಶ್ರೀದುರ್ಗಾ ಪರಮೇಶ್ವರಿ ಮತ್ತು ಹುಲಿ ಮುಖದ ಚೌಡೇಶ್ವರಿ ದೇವಿಗೆ ಅಭಿಷೇಕ, ಅಲಂಕಾರ, ಹಣ್ಣುಕಾಯಿ, ನೈವೇದ್ಯ ಸಮರ್ಪಿಸಿ ಪೂಜಿಸಿದರು. ಮಹಾಮಂಗಳಾರತಿಯಾಗಿ ತೀರ್ಥ-ಪ್ರಸಾದ ವಿನಿಯೋಗವಾಯಿತು.ನಂತರ ದೇವರ ಉತ್ಸವ ಮೂರ್ತಿಗಳನ್ನು ಅಡ್ಡೆಯಲ್ಲಿ ಪ್ರತಿಷ್ಠಾಪಿಸಿ ಕುಣಿಸುತ್ತಾ ಮೆರವಣಿಗೆ ಮಾಡಲಾಯಿತು.

ಮಧ್ಯಾಹ್ನ ನೂರಾರು ಮಂದಿ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆದು ಪೂಜಾ ಕೈಂಕರ್ಯ ಸಂಪನ್ನವಾಯಿತು. ಶ್ರೀವೀರಪಂಚಮ ಶನೇಶ್ವರ ದೇವಸ್ಥಾನ ಪ್ರಧಾನ ಅರ್ಚಕ ಲೋಕೇಶ್, ಆಡಳಿತ ಮಂಡಳಿ ಅಧ್ಯಕ್ಷ ವಿಜಯಕುಮಾರ್, ಉಪಾಧ್ಯಕ್ಷರಾದ ಶಿವರಾಜ್, ಉಮೇಶ್ ಗುಂಡ, ಖಜಾಂಚಿ ರೋಹಿತ್, ಸುಬ್ರಮಣಿ, ಪುನೀತ್, ಪದಾಧಿಕಾರಿಗಳು ಹಾಜರಿದ್ದರು.