ಸುAಟಿಕೊಪ್ಪ, ಮೇ ೩೧: ೧೭ನೇ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಬಹಿರಂಗ ಆಧಿವೇಶನದಲ್ಲಿ ಸುಂಟಿಕೊಪ್ಪದ ಸಮಸ್ಯೆಗಳು ಸೇರಿದಂತೆ ಕನ್ನಡ ನಾಡು ನುಡಿ. ಮಾನವ-ವನ್ಯಜೀವಿ ಸಂಘರ್ಷ, ತ್ಯಾಜ್ಯ ವಿಲೇವಾರಿಗೆ ವೈಜ್ಞಾನಿಕ ಪರಿಹಾರ ಸೇರಿದಂತೆ ಹತ್ತು ಪ್ರಮುಖ ನಿರ್ಣಯಗಳನ್ನು ಮಂಡಿಸಿ ಅನುಮೋದಿಸಲಾಯಿತು.

ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಪಿ. ಕೇಶವ ಕಾಮತ್ ಅಧ್ಯಕ್ಷತೆಯಲ್ಲಿ ನಡೆದ ಬಹಿರಂಗ ಆಧಿವೇಶನದಲ್ಲಿ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಪುದಿಯನೆರವನ ರೇವತಿ ರಮೇಶ್ ಅವರು ನಿರ್ಣಯಗಳನ್ನು ಮಂಡಿಸಿದರು.

ಸುಂಟಿಕೊಪ್ಪ ಹೋಬಳಿ ಕೇಂದ್ರವಾಗಿದ್ದು ೮ ಗ್ರಾಮ ಪಂಚಾಯಿತಿಗಳು ಈ ಕೇಂದ್ರಕ್ಕೆ ಸೇರಿದೆ. ಇಲ್ಲಿ ಒಂದೇ ಒಂದು ಪ್ರಾಥಮಿಕ ಆರೋಗ್ಯ ಕೇಂದ್ರವಿದೆ. ಈ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸಬೇಕು, ಸುಂಟಿಕೊಪ್ಪದಲ್ಲಿ ಸುಸಜ್ಜಿತ ಬಸ್‌ನಿಲ್ದಾಣ, ವಿಶ್ರಾಂತಿ ಕೊಠಡಿ ಮತ್ತು ಶೌಚಾಲಯವನ್ನು ನಿರ್ಮಿಸಬೇಕು. ಶಿಥಿಲಾವಸ್ಥೆಯಲ್ಲಿರುವ ಸುಂಟಿಕೊಪ್ಪ ಹೋಬಳಿಯ ನಾಡಕಚೇರಿಗೆ ನೂತನ ಕಟ್ಟಡ ನಿರ್ಮಿಸಬೇಕು, ವನ್ಯಜೀವಿ ಮಾನವ ಸಂಘರ್ಷ ತಡೆಗೆ ಪರಿಹಾರ ರೂಪಿಸಬೇಕು, ಗ್ರಾಮ ಪಂಚಾಯಿತಿ ಮಟ್ಟದಿಂದಲೇ ತ್ಯಾಜ್ಯ ನಿರ್ವಹಣೆಗೆ ಅಗತ್ಯ ಕ್ರಮವಹಿಸಬೇಕು, ಕೊಡಗನ್ನು ಕ್ರೀಡಾ ಜಿಲ್ಲೆಯೆಂದು ಘೋಷಿಸಬೇಕು, ಕೊಡಗನ್ನು ಆಳಿದ ಹಾಲೇರಿ ವಂಶಸ್ಥರಾದ ಲಿಂಗರಾಜ ಕೊಡಗಿನ ಭೂ ಪ್ರದೇಶವನ್ನು ಸರ್ವೆ ಮಾಡಿಸಿ ಲಿಂಗರಾಜನ ಶಿಸ್ತು ಎಂದು ದಾಖಲಿಸಿದ್ದು, ಇದನ್ನು ಡಿಜಿಟಲೀಕರಣಗೊಳಿಸಿ ಸರ್ವರಿಗೂ ತಿಳಿಯುವಂತೆ ಮಾಡಬೇಕು. ಕೊಡಗು ಜಿಲ್ಲಾ ಸಾಹಿತ್ಯ ಪರಿಷತ್ತಿಗೆ ನಿವೇಶನದಲ್ಲಿ ಕಟ್ಟಡ ನಿರ್ಮಾಣಕ್ಕೆ ಸರಕಾರ ಅನುದಾನ ಬಿಡುಗಡೆಗೊಳಿಸಬೇಕು, ಎಲ್ಲಾ ಕನ್ನಡ ಮಾದ್ಯಮ ಶಾಲೆಗಳಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಿ ವಿಷಯವಾರು ಶಿಕ್ಷಕರನ್ನು ನೇಮಿಸಿ ಸರಕಾರಿ ಶಾಲೆಗಳನ್ನು ಸಬಲೀಕರಣಗೊಳಿಸಬೇಕು, ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ, ತಾಲೂಕು, ಹೋಬಳಿ ಘಟಕಗಳಿಗೆ ಹೆಚ್ಚಿನ ಅನುದಾನ ನೀಡಿ ಹೆಚ್ಚು ಕನ್ನಡ ಪರ ಕಾರ್ಯಕ್ರಮಗಳನ್ನು ನಡೆಸುವಂತಾಗಿ ಕರ್ನಾಟಕದಲ್ಲಿ ಕನ್ನಡಕ್ಕೆ ಆದ್ಯತೆ ನೀಡುವಂತೆ ನಿರ್ಣಯಗಳನ್ನು ಮಂಡಿಸಲಾಯಿತು.

ವೇದಿಕೆಯಲ್ಲಿ ಹಣಕಾಸು ಸಮಿತಿಯ ಅಧ್ಯಕ್ಷ, ಸ್ವಾಗತ ಸಮಿತಿಯ ಉಪಾಧ್ಯಕ್ಷ ಎ.ಲೋಕೇಶ್ ಕುಮಾರ್, ಕಸಾಪ ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್, ಸಂಘಟನಾ ಕಾರ್ಯದರ್ಶಿ ಬಿ.ಎಂ.ಕೆ. ವಾಸು ರೈ, ಸಹಕಾರ್ಯದರ್ಶಿ ಎ.ವಿ.ಮಂಜುನಾಥ್ ಮತ್ತಿತರ ಪರಿಷತ್ ಪದಾಧಿಕಾರಿಗಳು ಇದ್ದರು.