ಸುಂಟಿಕೊಪ್ಪ, ಮೇ ೩೧: ವನ್ಯಜೀವಿ ಉಪಟಳ ನಿಯಂತ್ರಿಸಬಹುದೇ ಹೊರತು ಶಾಶ್ವತ ಪರಿಹಾರ ಎಂಬುದು ಮರೀಚಿಕೆ ಎಂದು ಹಿರಿಯ ಪತ್ರಕರ್ತ ಎಸ್.ಜಿ.ಉಮೇಶ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸುಂಟಿಕೊಪ್ಪದಲ್ಲಿ ಆಯೋಜಿತ ಕೊಡಗು ಜಿಲ್ಲಾ ೧೭ನೇ ಕನ್ನಡ ಸಾಹಿತ್ಯ ಸಮ್ಮೇಳನದ ಮೊದಲ ದಿನದ ವಿಚಾರಗೋಷ್ಠಿಯಲ್ಲಿ ವನ್ಯ ಜೀವಿಗಳ ಉಪಟಳ ಶಾಶ್ವತ ಪರಿಹಾರ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು. ಕಾಡಾನೆ ಹಾಗೂ ವನ್ಯಜೀವಿಗಳ ಸಂಘರ್ಷವನ್ನು ಪರಿಣಾಮಕಾರಿಯಾಗಿ ತಡೆಯಬಹುದೇ ಹೊರತು ಶಾಶ್ವತ ಪರಿಹಾರ ಇಲ್ಲ ಜೊತೆಗೆ ನಿಯಂತ್ರಣ ಸಾಧಿಸಬೇಕಾದರೆ ಅರಣ್ಯದಂಚಿನ ಮತ್ತು ಗ್ರಾಮೀಣ ಭಾಗದ ಜನರ ಸಂಪೂರ್ಣ ಸಹಕಾರ ಅಗತ್ಯ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು. ಸರಕಾರದ ಮಟ್ಟದಲ್ಲಿ ಅರಣ್ಯ ಇಲಾಖೆಯ ಮೂಲಕ ಕೈಗೊಂಡ ಪರಿಹಾರೋಪಾಯಗಳ ಕುರಿತು ಅಂಕಿ ಅಂಶಗಳ ಸಹಿತವಾಗಿ ಮಾಹಿತಿ ನೀಡಿದರು.
ಕೊಡಗು ಕಂಡ ಮಹಿಳಾ ಸಾಹಿತಿಗಳು ಮತ್ತು ಅವರ ಕೃತಿಗಳ ಕುರಿತು ಸಾಹಿತಿ ಮತ್ತು ಶಿಕ್ಷಕಿ ಎನ್.ಕೆ. ಮಾಲಾದೇವಿ ಮೂರ್ತಿ ವಿಷಯ ಮಂಡನೆ ಮಾಡಿ ಕೊಡಗಿನ ಗೌರಮ್ಮ ಅವರಿಂದ ಪ್ರಾರಂಭವಾದ ಮಹಿಳಾ ಸಾಹಿತ್ಯ ಪ್ರಪಂಚ ಒಂದು ಶತಮಾನದ ಅವಧಿಯಲ್ಲಿ ವಿಪುಲವಾಗಿ ಬೆಳೆದಿದೆ ಎಂದರು. ಗೋಷ್ಠಿಯ ಅಧ್ಯಕ್ಷತೆಯನ್ನು ವೈದ್ಯರು ಮತ್ತು ಸಾಹಿತಿ ಡಾ.ಕೆ.ಬಿ. ಸೂರ್ಯಕುಮಾರ್ ವಹಿಸಿದ್ದರು.
ಸಾಹಿತಿ ಕಾಜೂರು ಸತೀಶ್ ಆಶಯ ನುಡಿಗಳನ್ನಾಡಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಮೇಲ್ವಿಚಾರಕರಾದ ಸಂತೋಷ್ ಕುಮಾರ್ ಉಪಸ್ಥಿತರಿದ್ದರು.
ಗೀತ ಗಾಯನ
ವಿಚಾರಗೋಷ್ಠಿಗೂ ಮೊದಲು ಕನ್ನಡ ಗೀತ ಗಾಯನ ಕಾರ್ಯಕ್ರಮ ನಡೆಯಿತು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೊಡಗು ಜನಪದ ಪರಿಷತ್ತಿನ ಅಧ್ಯಕ್ಷ ಬಿ.ಜಿ.ಅನಂತಶಯನ ವಹಿಸಿದ್ದರು. ಕಾರ್ಯಕ್ರಮದ ಉದ್ಘಾಟನೆಯನ್ನು ಜಿಲ್ಲಾ ಪೊಲೀಸ್ ಉಪನಿರೀಕ್ಷಕ ಕೆ.ಎಸ್.ಧನಂಜಯ ಅವರು ಭಾವಗೀತೆಯೊಂದನ್ನು ಪ್ರಸ್ತುತ ಪಡಿಸುವ ಮೂಲಕ ಉದ್ಘಾಟಿಸಿದರು. ಅತಿಥಿಯಾಗಿ ಸಮಾಜ ಸೇವಕ ಬಾಬಿಂದ್ರ ಪ್ರಸಾದ್ ಉಪಸ್ಥಿತರಿದ್ದರು.