ಸಿದ್ದಾಪುರ, ಮೇ ೩೧: ಸಿದ್ದಾಪುರದ ಸಂಜೀವಿನಿ ಒಕ್ಕೂಟ ಮತ್ತು ಬೆಂಗಳೂರಿನ ಇಂಡಸ್ಟಿç ಫೌಂಡೇಶನ್ ಜಂಟಿ ಆಶ್ರಯದಲ್ಲಿ ಸಿದ್ದಾಪುರದ ಪಂಚಾಯಿತಿ ಸಭಾಂಗಣದಲ್ಲಿ ಸಿದ್ದಾಪುರದ ಪ್ರಧಾನಮಂತ್ರಿ ವನದನ, ವನಸಿರಿ ವಿಕಾಸ ಕೇಂದ್ರದ ವತಿಯಿಂದ ಸಂಜೀವಿನಿ ಒಕ್ಕೂಟದ ಸಂಘಟನೆಯ ಪರಿಶಿಷ್ಟ ವರ್ಗದ ಮಹಿಳೆಯರಿಗೆ ಸ್ವಯಂಉದ್ಯೋಗದ ಬಗ್ಗೆ ಹಾಗೂ ಕಾಡಿನಲ್ಲಿ ಬೆಳೆದ ಜೇನುತುಪ್ಪ ಮಾರಾಟದ ಕುರಿತು ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ವೀರಾಜಪೇಟೆ ತಾಲೂಕು ಕಾರ್ಯನಿರ್ವಹಣಾಧಿಕಾರಿ ರಾಜೇಶ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಮಹಿಳೆಯರು ಸ್ವಯಂ ಉದ್ಯೋಗದ ಮೂಲಕ ಸ್ವಾವಲಂಬಿ ಬದುಕನ್ನು ಕಟ್ಟಿಕೊಳ್ಳಬೇಕೆಂದು ಕರೆ ನೀಡಿದರು. ಮಹಿಳೆಯರು ಇತ್ತೀಚಿನ ದಿನಗಳಲ್ಲಿ ಎಲ್ಲ ಕ್ಷೇತ್ರದಲ್ಲೂ ಸಾಧನೆ ಮಾಡುತ್ತಿದ್ದು ಉತ್ತಮ ಬೆಳವಣಿಗೆ ಎಂದರು. ಮಹಿಳೆಯರು ತಮ್ಮ ಸ್ವಾವಲಂಬಿ ಬದುಕನ್ನು ರೂಪಿಸಿಕೊಳ್ಳಲು ಜೇನುತುಪ್ಪ ಮನೆಯಲ್ಲಿ ಮಾಡಿಕೊಳ್ಳುವ ಮೂಲಕ ಮಾರುಕಟ್ಟೆಯಲ್ಲಿ ಮಾರಾಟ ಮಾಡಿ ಉತ್ತಮ ಲಾಭವನ್ನು ಗಳಿಸುವಂತೆ ಸಲಹೆ ನೀಡಿದರು. ಸಂಜೀವಿನಿ ಒಕ್ಕೂಟದ ಪ್ರಮುಖರಾದ ಎಂ.ಎ. ಯಮುನಾ ಮಾತನಾಡಿ, ಸಂಜೀವಿನಿ ಒಕ್ಕೂಟದ ವತಿಯಿಂದ ಸಿದ್ದಾಪುರದಲ್ಲಿ ಮಹಿಳೆಯರಿಗೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಮಹಿಳೆಯರಿಗೆ ಆರ್ಥಿಕ ಸ್ಥಿತಿ ವೆಚ್ಚಗಳು ಮಹಿಳೆಯರೇ ತಯಾರಿಸಿದ ತಿಂಡಿ ಪದಾರ್ಥಗಳು ಇನ್ನಿತರ ತರಕಾರಿಗಳ ಮಾರಾಟ ಮೇಳವನ್ನು ಸಿದ್ದಾಪುರ ಗ್ರಾಮ ಪಂಚಾಯಿತಿ ಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು. ಇದಲ್ಲದೆ ಸಂಘಟನೆಯು ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡಿದೆ ಎಂದು ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ ಸಂಜೀವಿನಿ ಒಕ್ಕೂಟದ ವತಿಯಿಂದ ನೂತನ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಾಜೇಶ್ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಸಿದ್ದಾಪುರದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ತಿಮ್ಮಯ್ಯ, ಜಿಲ್ಲಾ ವ್ಯವಸ್ಥಾಪಕಿ ಚಾಂದಿನಿ, ಸಂಜೀವಿನಿ ಒಕ್ಕೂಟದ ಪದಾಧಿಕಾರಿಗಳಾದ ರೀನಾ ತುಳಸಿ, ಸುಮತಿ, ವಸಂತಿ, ಇಂದಿರಾ, ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಪಳನಿಸ್ವಾಮಿ ಹಾಗೂ ಇನ್ನಿತರರು ಹಾಜರಿದ್ದರು. ಎಂ.ಎ. ಯಮುನಾ ಸ್ವಾಗತಿಸಿ, ವಂದಿಸಿದರು.