ಗೋಣಿಕೊಪ್ಪಲು, ಮೇ ೩೧: ಗೋಣಿಕೊಪ್ಪದಲ್ಲಿ ವರುಣ ಆರ್ಭಟ ತೋರಿದ್ದಾನೆ. ಪರಿಣಾಮ ಹತ್ತಾರು ಮನೆಗಳ ಹಂಚುಗಳು ಹಾರಿ ಹೋಗಿ ನಷ್ಟ ಸಂಭವಿಸಿದೆ. ಗೋಣಿಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾವೇರಿ ಹಿಲ್ಸ್ ಬಡಾವಣೆಯಲ್ಲಿ ಈ ಘಟನೆ ನಡೆದಿದ್ದು ಬಡಾವಣೆಯ ಹತ್ತಾರು ಮನೆಗಳಿಗೆ ಹಾನಿ ಸಂಭವಿಸಿದೆ. ಗಾಳಿ ಸಹಿತ ಮಳೆ ರಭಸಕ್ಕೆ ಹಂಚುಗಳು ದೂರಕ್ಕೆ ಹಾರಿ ಬೀಳುತ್ತಿದ್ದವು. ಇದರಿಂದ ಮನೆಯೊಳಗೆ ನೀರು ಸುರಿಯಲಾರಂಭಿಸಿ ವ್ಯತಿರಿಕ್ತ ಪರಿಣಾಮ ಸೃಷ್ಟಿಯಾಯಿತು. ಸುದ್ದಿ ತಿಳಿದ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಹಕ್ಕೀಮ್ ಹಾನಿಯಾದ ಮನೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ಘಟನೆ ಸ್ಥಳಕ್ಕೆ ಕಂದಾಯ ಅಧಿಕಾರಿಗಳನ್ನು ಬರಮಾಡಿಕೊಂಡು ಆದ ನಷ್ಟದ ಬಗ್ಗೆ ಮಾಹಿತಿ ನೀಡಿದರು.