ಸಿದ್ದಾಪುರ, ಮೇ ೩೧ ಸಿದ್ದಾಪುರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾನುವಾರ ಸಂಜೆ ಸುರಿದ ಗಾಳಿ ಸಹಿತ ಮಳೆಯಿಂದಾಗಿ ಹಾನಿ ಸಂಭವಿಸಿದೆ.

ನೆಲ್ಲಿಹುದಿಕೇರಿ ಗ್ರಾಮದ ಶಾಲೆ ರಸ್ತೆಯ ನಿವಾಸಿಯಾಗಿರುವ ರವೀಂದ್ರ ಭಟ್ ಎಂಬವರ ಮನೆಗೆ ಎರಡು ಮರಗಳು ಬಿದ್ದು ಮೇಲ್ಛಾವಣಿಯ ಹಂಚುಗಳು ಸಂಪೂರ್ಣವಾಗಿ ಹಾನಿಗೊಳಗಾಗಿದೆ. ಅದೃಷ್ಟವಶಾತ್ ಮನೆಯ ಮಂದಿ ಅಪಾಯದಿಂದ ಪಾರಾಗಿದ್ದಾರೆ. ಇದಲ್ಲದೆ ಈ ಭಾಗದಲ್ಲಿ ಕೆಲವು ಮರಗಳು ಗಾಳಿ, ಮಳೆಗೆ ಸಿಲುಕಿ ನೆಲಕುರುಳಿವೆ.

ಸಿದ್ದಾಪುರದಲ್ಲಿ ಭಾನುವಾರ ಸಂಜೆ ಗುಡುಗು ಸಿಡಿಲು ಸಹಿತ ಧಾರಾಕಾರ ಮಳೆ ಸುರಿಯಿತು. ದಿಢೀರ್ ಸುರಿದ ಮಳೆಯಿಂದಾಗಿ ಸಂತೆಯ ದಿನವಾದ ಭಾನುವಾರದಂದು ಮಳೆಯಿಂದಾಗಿ ವ್ಯಾಪಾರಸ್ಥರು ಸಮಸ್ಯೆಗೆ ಸಿಲುಕಿಕೊಂಡರು. ಗ್ರಾಹಕರು ಪರಿದಾಡಿದರು.

ವಿದ್ಯುತ್ ಕಡಿತ

ಸಿದ್ದಾಪುರ ಸಮೀಪದ ನೆಲ್ಲಿಹುದಿಕೇರಿ ನಲ್ವತ್ತೇಕರೆ, ಬೆಟ್ಟದ ಕಾಡು, ಭಾಗದಲ್ಲಿ ಗಾಳಿ - ಮಳೆಗೆ ಸಿಲುಕಿ ಮರಗಳು ಬಿದ್ದು ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಸಿದ್ದಾಪುರ ಸಮೀಪದ ಮುಲ್ಲೆತೋಡು, ಪಾಲಿಬೆಟ್ಟ ರಸ್ತೆಗಳಲ್ಲಿ ಮರಗಳು ಬಿದ್ದು ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.