ಸಿದ್ದಾಪುರ, ಜೂ. ೧: ಭಾನುವಾರದಂದು ಸುರಿದ ಧಾರಾಕಾರ ಮಳೆ, ರಭಸವಾದ ಗಾಳಿಗೆ ಮರಗಳು ಬಿದ್ದು ನೆಲ್ಲಿಹುದಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಂಬಾರಗುAಡಿ ನಿವಾಸಿ ಪ್ರಕಾಶ್, ಪುಷ್ಪ ಮತ್ತು ಶಾಲೆ ರಸ್ತೆಯ ನಿವಾಸಿ ಪಾರ್ವತಿ ಶಂಕರನಾರಾಯಣ ಭಟ್ ಅವರ ಮನೆ ಸೇರಿದಂತೆ ಒಟ್ಟು ೩ ಮನೆಗಳು ಭಾಗಶಃ ಹಾನಿಯಾಗಿವೆ.
ಇದಲ್ಲದೆ ಇತರ ೪ ಮರಗಳು ಬಿದ್ದು ಸಣ್ಣಪುಟ್ಟ ಹಾನಿಯಾಗಿರುವುದಾಗಿ ತಿಳಿದುಬಂದಿದೆ. ಗಾಳಿಗೆ ಮರಗಳು ಬಿದ್ದ ಪರಿಣಾಮವಾಗಿ ಭಾಗಶಃ ಹಾನಿಯಾಗಿರುವ ಮನೆಗಳಿಗೆ ಕುಶಾಲನಗರ ತಾಲೂಕು ಕಂದಾಯ ಪರಿವೀಕ್ಷಕ ಸಂತೋಷ್ ಹಾಗೂ ಗ್ರಾಮ ಆಡಳಿತಾಧಿಕಾರಿ ಎಸ್.ಕೆ. ಸಂತೋಷ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನೆಲ್ಲಿಹುದಿಕೇರಿ ಗ್ರಾಮದ ಪ್ರವಾಹ ಪೀಡಿತ ಪ್ರದೇಶದಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಕಂದಾಯ ಇಲಾಖೆ ಅಧಿಕಾರಿಗಳು ತಿಳಿಸಿದರು. ಗಾಳಿ-ಮಳೆಗೆ ಮರಗಳು ಬಿದ್ದ ಸಂದರ್ಭದಲ್ಲಿ ಮನೆಯ ಮಂದಿ ಮನೆಯ ಒಳಗೆ ಇದ್ದರೂ ಕೂಡ ಅದೃಷ್ಟವಶಾತ್ ಯಾವುದೇ ಅಪಾಯಗಳು ಸಂಭವಿಸಲಿಲ್ಲ.