ಕಣಿವೆ, ಜೂ. ೧: ಗ್ರಾಮೀಣ ಪ್ರದೇಶಗಳಲ್ಲಿ ಕೃಷಿಕ ಹುಡುಗರಿಗೆ ವಿವಾಹ ಭಾಗ್ಯವಿಲ್ಲದ ಕಾರಣ ಮಕ್ಕಳಿಲ್ಲ. ವಿವಾಹವಾಗಿರುವ ಬೆರಳೆಣಿಕೆಯ ಮಂದಿಗೆ ಮಕ್ಕಳಾಗದಿರುವುದು ಹಳ್ಳಿಗಳ ಸರ್ಕಾರಿ ಶಾಲೆಗಳ ಮೇಲೆ ಘೋರ ಪರಿಣಾಮ ಬೀರಿದೆ. ಇರುವ ಬೆರಳೆಣಿಕೆಯ ಮಕ್ಕಳನ್ನು ಪೋಷಕರು ಖಾಸಗಿ ಶಾಲೆಗಳಿಗೆ ದಾಖಲಿಸುತ್ತಿದ್ದಾರೆ. ಅಸಹಾಯಕ, ಅಮಾಯಕ, ಬಡ ಪೋಷಕರು ವಿಧಿ ಇಲ್ಲದೆ ಸರ್ಕಾರಿ ಶಾಲೆಗಳಿಗೆ ಸೇರಿಸುವಂತಹ ದುಸ್ಥಿತಿ ನಿರ್ಮಾಣಗೊಂಡಿದೆ. ಹಾಗಾಗಿ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಪ್ರಮಾಣ ವರ್ಷದಿಂದ ವರ್ಷಕ್ಕೆ ಗಣನೀಯವಾಗಿ ಕುಂಟಿತಗೊಳ್ಳುತ್ತಿದೆ.
ಕಣಿವೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಒಂದನೇ ತರಗತಿಯಿಂದ ೭ನೇ ತರಗತಿಯವರೆಗೆ ಶಾಲೆಗೆ ದಾಖಲಾಗಿರುವ ವಿದ್ಯಾರ್ಥಿಗಳ ಸಂಖ್ಯೆ ಕೇವಲ ೧೬. ಈ ಪೈಕಿ ಒಂದನೇ ತರಗತಿಗೆ ಈ ಬಾರಿ ಒಂದೇ ಒಂದು ಮಗು ದಾಖಲಾಗಿಲ್ಲ.
ಎರಡನೇ ತರಗತಿಯಲ್ಲಿ ಕೇವಲ ಒಂದು ವಿದ್ಯಾರ್ಥಿ ಇದೆ. ಮೂರನೇ ತರಗತಿಗೂ ವಿದ್ಯಾರ್ಥಿಗಳ ದಾಖಲಾತಿ ಇಲ್ಲ. ನಾಲ್ಕನೇ ತರಗತಿಯಲ್ಲಿ ಇಬ್ಬರು ವಿದ್ಯಾರ್ಥಿಗಳಿದ್ದರೆ, ಐದನೇ ತರಗತಿಯಲ್ಲಿ ಒಂದು ವಿದ್ಯಾರ್ಥಿ ಹಾಗೂ ೬ನೇ ತರಗತಿಯಲ್ಲಿ ಎಂಟು ವಿದ್ಯಾರ್ಥಿ, ಏಳನೇ ತರಗತಿಯಲ್ಲಿ ಒಂದು ವಿದ್ಯಾರ್ಥಿ ಇದ್ದು ನಾಲ್ಕು ಜನ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. ಸೋಮವಾರದಿಂದ ಆರಂಭವಾದ ಶಾಲೆಗೆ ಕೊಡುಗೆ ಡಯಟ್‌ನ ಪ್ರಾಂಶುಪಾಲ ರಾಮಚಂದ್ರ ರಾಜೇ ಅರಸು ಭೇಟಿ ನೀಡಿ ಶಾಲಾ ವ್ಯವಸ್ಥೆಗಳನ್ನು ಪರಿಶೀಲಿಸಿದರು.
ಮಕ್ಕಳ ಹಾಜರಾತಿ, ಅಲ್ಲಿನ ಅಡುಗೆ ಸಿದ್ಧತೆ ಹಾಗೂ ಸ್ವಚ್ಛತೆಯನ್ನು ಪರಿಶೀಲಿಸಿದರು. ಇದೇ ಸಂದರ್ಭ ಇಲಾಖೆಯಿಂದ ಶಾಲೆಗೆ ನೀಡಿರುವ ಪಠ್ಯಪುಸ್ತಕಗಳನ್ನು ಅವರು ವಿತರಿಸಿದರು. ಶಾಲಾ ಮುಖ್ಯ ಶಿಕ್ಷಕಿ ಕಸ್ತೂರಿ, ಶಾಲೆಯ ವಿದ್ಯಾರ್ಥಿಗಳ ಪೋಷಕರು ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.