ಸಿದ್ದಾಪುರ, ಜೂ.೧: ನ್ಯಾಯಬೆಲೆ ಅಂಗಡಿಗಳಲ್ಲಿ ಸರ್ವರ್ ಸಮಸ್ಯೆ ಇದ್ದರೂ ಕೂಡ ತಡರಾತ್ರಿವರೆಗೆ ಪಡಿತರ ಗ್ರಾಹಕರಿಗೆ ಅನ್ನಭಾಗ್ಯ ಅಕ್ಕಿಯನ್ನು ನೀಡುವ ಮೂಲಕ ನೆಲ್ಲಿಹುದಿಕೇರಿ ಹಾಗೂ ಅಭ್ಯತ್‌ಮಂಗಲ ಗ್ರಾಮಗಳ ನ್ಯಾಯಬೆಲೆ ಅಂಗಡಿಯವರು ಸಕಾಲಕ್ಕೆ ಅಕ್ಕಿ ವಿತರಿಸಿದರು.

ಕಳೆದ ಕೆಲವು ದಿನಗಳಿಂದ ನ್ಯಾಯಬೆಲೆ ಅಂಗಡಿಗಳಲ್ಲಿ ಸರ್ವರ್ ಸಮಸ್ಯೆಯಿಂದಾಗಿ ಅನ್ನಭಾಗ್ಯ ಅಕ್ಕಿಯನ್ನು ಪಡಿತರ ಚೀಟಿಯ ಗ್ರಾಹಕರಿಗೆ ವಿತರಿಸಲು ಸಮಸ್ಯೆ ಎದುರಾಗಿತ್ತು. ಈ ಎರಡು ಗ್ರಾಮಗಳಲ್ಲಿ ಬಹುತೇಕ ಕೂಲಿ ಕಾರ್ಮಿಕರು ಹೆಚ್ಚಾಗಿದ್ದು ಕೂಲಿ ಕೆಲಸಕ್ಕೆ ತೆರಳಿ ಸಂಜೆ ನ್ಯಾಯಬೆಲೆ ಅಂಗಡಿಗೆ ಬಂದರೂ ಕೂಡ ಸರ್ವರ್ ಸಮಸ್ಯೆಯಿಂದಾಗಿ ಅಕ್ಕಿ ಪಡೆಯಲು ಸಾಧ್ಯವಾಗುತ್ತಿರಲಿಲ್ಲ.

ಇದನ್ನು ಮನಗಂಡ ಕುಶಾಲನಗರ ತಾಲೂಕು ಆಹಾರ ನಿರೀಕ್ಷಕಿ ಸ್ವಾತಿ ಅವರ ಮಾರ್ಗದರ್ಶನದಲ್ಲಿ ನ್ಯಾಯಬೆಲೆ ಅಂಗಡಿ ಮಾಲೀಕರಾದ ಗಿರೀಶ್ ಹಾಗೂ ಸಿಬ್ಬಂದಿ ಸುಧಾ ಸೇರಿ ಬೆಳಿಗ್ಗೆ ೭ ರಿಂದ ರಾತ್ರಿ ೧೦ ಗಂಟೆಯವರೆಗೆ ನೆಲ್ಲಿಹುದಿಕೇರಿ ಗ್ರಾಮ ಹಾಗೂ ಅಭ್ಯತ್‌ಮಂಗಲ ಗ್ರಾಮದ ಪಡಿತರ ಗ್ರಾಹಕರಿಗೆ ಅಕ್ಕಿ ವಿತರಿಸಲು ಸಹಕಾರ ನೀಡಿದರು.

ಅಲ್ಲದೆ ತಿಂಗಳ ಅಂತ್ಯದೊಳಗೆ ಆಗಿಂದಾಗೆ ಗ್ರಾಹಕರಿಗೆ ಸಂದೇಶ ಕಳಿಸುತ್ತ ಎಲ್ಲಾ ಗ್ರಾಹಕರಿಗೂ ಅನ್ನಭಾಗ್ಯ ಅಕ್ಕಿಯನ್ನು ನೀಡುವಲ್ಲಿ ಯಶಸ್ವಿಯಾದರು.

ಈ ಬಾರಿ ಅನ್ನಭಾಗ್ಯ ಅಕ್ಕಿಯನ್ನು ಬಿಲ್ ಮಾಡಲು ಸರ್ವರ್ ಸಮಸ್ಯೆ ಪ್ರಾರಂಭದಿAದಲೂ ಎದುರಾಯಿತು. ಒಂದು ಗ್ರಾಹಕರ ಪಡಿತರ ಚೀಟಿ ಬಿಲ್ ಮಾಡಲು ಸಮಯ ತೆಗೆಯುತ್ತಿತ್ತು. ಬೆಳಿಗ್ಗಿನಿಂದ ರಾತ್ರಿವರೆಗೆ ಕುಳಿತು ನ್ಯಾಯಬೆಲೆ ಅಂಗಡಿಯ ಮಾಲೀಕರು ಹಾಗೂ ಸಿಬ್ಬಂದಿ ಶ್ರಮವಹಿಸಿ ಅಕ್ಕಿ ವಿತರಿಸಿದರು.