ನಾಪೋಕ್ಲು, ಜೂ.೧: ಅರಮನೆಪಾಲೆ ಸಮಾಜದ ಮರಣ ಧನಸಹಾಯ ನಿಧಿಯ ಮಹಾಸಭೆಯನ್ನು ಮೂರ್ನಾಡಿನ ವ್ಯವಸಾಯ ಸಹಕಾರ ಬ್ಯಾಂಕ್ ಸಭಾಂಗಣದಲ್ಲಿ ಭಾನುವಾರ ನಡೆಸಲಾಯಿತು.

ಸಭೆಯಲ್ಲಿ ಪ್ರಸ್ತಾವಿಕವಾಗಿ ಮಾತನಾಡಿದ ಅರಮನೆಪಾಲೆ ಸಮಾಜದ ಪ್ರಧಾನ ಸಂಘಟಕ ಮಂದಣ್ಣ ಪಿ.ಕೆ, ಸಮುದಾಯ ಭಾಂದವರು ಮರಣ ಹೊಂದಿದ ಸಮಯದಲ್ಲಿ ಸಮುದಾಯದ ಪ್ರತಿ ಸದಸ್ಯರಿಂದ ರೂಪಾಯಿ ೨೫ ರಂತೆ ಸಂಗ್ರಹಿಸಿ ಮರಣ ಹೊಂದಿದ ಸದಸ್ಯರ ಕುಟುಂಬಕ್ಕೆ ತಲಾ ಹತ್ತು ಸಾವಿರದಂತೆ ೨೦೧೫ನೇ ಇಸವಿಯಿಂದ ಇಲ್ಲಿಯವರೆಗೆ ವಿತರಿಸಲಾಗುತ್ತಿದೆ. ಇಲ್ಲಿಯವರೆಗೆ ಸುಮಾರು ಏಳು ಲಕ್ಷದ ತೊಂಬತ್ತು ಸಾವಿರ ರೂಪಾಯಿಗಳನ್ನು ವಿತರಿಸಲಾಗಿದೆ ಎಂದು ಮಾಹಿತಿ ನೀಡಿದರು.

ಇದು ಅರಮನೆಪಾಲೆ ಸಮಾಜದ ಅತ್ಯುನ್ನತ ಸೇವಾ ಕಾರ್ಯವಾಗಿದ್ದು ಆಪತ್ಕಾಲದಲ್ಲಿ ಸಮುದಾಯ ಭಾಂದವರನ್ನು ರಕ್ಷಿಸುತ್ತಿದೆ. ಸಮಾಜದ ಅಧೀನದಲ್ಲಿ ಸುಮಾರು ೩೨ ಗ್ರಾಮಗಳಿಗೆ ಸಂಬAಧಿಸಿದAತೆ ಒಂಬತ್ತು ಗ್ರಾಮಸಮಿತಿಗಳನ್ನು ರಚಿಸಿಕೊಂಡಿದ್ದು, ಪ್ರತಿ ಗ್ರಾಮ ಸಮಿತಿಗಳ ಅಭ್ಯುದಯಕ್ಕಾಗಿ ಸಮಾಜದ ಪರವಾಗಿ ಸೃಜನಶೀಲ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು.

ಸಮಾಜ ಭಾಂದ ವರನ್ನು ಮುಖ್ಯ ವಾಹಿನಿಯಲ್ಲಿ ತರುವಲ್ಲಿ ಸತತ ಪ್ರಯತ್ನಗಳನ್ನು ಕೈ ಗೊಳ್ಳಲಾಗುತ್ತಿದೆ ಎಂದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಮಂಜುನಾಥ್ ಕಕ್ಕಬ್ಬೆ, ಸಮುದಾಯ ಬಾಂಧವರ ಅಭಿವೃದ್ಧಿಗಾಗಿ ಅರಮನೆಪಾಲೆ ಸಮಾಜ ದುಡಿಯುತ್ತಿದ್ದು ಸಮುದಾಯ ಬಾಂಧವರು ಸಮಾಜದ ಎಲ್ಲಾ ಕಾರ್ಯಗಳಲ್ಲಿ ಕೈ ಜೋಡಿಸಬೇಕಾಗಿ ಕರೆ ನೀಡಿದರು.

ಸಭೆಯಲ್ಲಿ ಸಮಾಜದ ಉಪಾಧ್ಯಕ್ಷ ಸುಜು ದೇವಯ್ಯ ಬಾಳುಗೋಡು, ಸಮಾಜದ ಕಾರ್ಯದರ್ಶಿಗಳಾದ ದೇವಯ್ಯ ಹಾಕತ್ತೂರು, ಸಮಾಜದ ಖಜಾಂಚಿ ಮಾಜಿ ಯೋಧರಾದ ಸುಭಾಷ್ ಬಾಳುಗೋಡು, ಮರಣ ಧನಸಹಾಯ ನಿಧಿಯ ಅಧ್ಯಕ್ಷರಾದ ಯತೀಶ್ ಬಿದ್ದಪ್ಪ ಬಾಳುಗೋಡು, ಸಮಾಜದ ನಿರ್ದೇಶಕರಾದ ಲೀನಾ ಶಿವಪ್ಪ ಕಂಡಿಮಕ್ಕಿ, ದಮಯಂತಿ ಬಿಳಿಗೇರಿ, ಸರಿತ ನಾಗಬಾಣೆ, ರವಿ ಗಣೇಶ್ ಪೇರೂರು ಮತ್ತು ವಿವಿಧ ಗ್ರಾಮ ಸಮಿತಿ ಅಧ್ಯಕ್ಷರು, ಕಾರ್ಯದರ್ಶಿಗಳು, ಪದಾಧಿಕಾರಿಗಳು, ಕ್ರಿಕೆಟ್ ಪಂದ್ಯಾಟಗಳ ಸಮಿತಿ ಕಾರ್ಯದರ್ಶಿಗಳಾದ ರಘು ಹಾಕತ್ತೂರು ಮತ್ತು ಸಮಾಜದ ಸದಸ್ಯರು ಭಾಗವಹಿಸಿದ್ದರು.

ಸಭೆಯಲ್ಲಿ ಮರಣ ಹೊಂದಿದ ಕುಟುಂಬದ ಸದಸ್ಯರಿಗೆ ಸಮಾಜದ ವತಿಯಿಂದ ಮರಣ ಧನಸಹಾಯ ನಿಧಿಯ ಹಣವನ್ನು ವಿತರಣೆ ಮಾಡಲಾಯಿತು.