ಸೋಮವಾರಪೇಟೆ, ಜೂ. ೧: ಸರ್ಕಾರಿ ಶಾಲೆಗಳನ್ನು ಉಳಿಸುವ ಜವಾಬ್ದಾರಿ ಸಮಾಜದ್ದಾಗಿದೆ. ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಸಮಾಜಕ್ಕೆ ಮಾದರಿಯಾಗಿ ಭವಿಷ್ಯ ರೂಪಿಸಿಕೊಂಡ ಹಲವಷ್ಟು ಮಾದರಿಗಳು ನಮ್ಮ ಮುಂದಿವೆ ಎಂದು ಸಮಾಜ ಸೇವಕ ಹಾಗೂ ಲೀಡಿಂಗ್ ಎಡ್ಜ್ ಸೇವಾ ಸಂಸ್ಥೆಯ ಮುಖ್ಯಸ್ಥ ಪ್ರಸನ್ನ ಎಡಿಕೇರಿ ಹೇಳಿದರು. ಸೋಮವಾರಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಪಟ್ಟಣದ ಪತ್ರಿಕಾ ಭವನ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸೋಮವಾರಪೇಟೆ ತಾಲೂಕು ವ್ಯಾಪ್ತಿಯ ಸರ್ಕಾರಿ ಶಾಲೆಗಳಲ್ಲಿ ಎಸ್.ಎಸ್.ಎಲ್.ಸಿ. ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ನೆರವೇರಿಸಿ ಅವರು ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಶಾಲೆಗಳಿಗೆ ವಿದ್ಯಾರ್ಥಿಗಳು ದಾಖಲಾಗುವ ಸಂಖ್ಯೆ ಕಡಿಮೆಯಾಗುತ್ತಿದ್ದು, ಮುಚ್ಚುವ ಸಂಖ್ಯೆ ಹೆಚ್ಚುತ್ತಿದೆ; ಇದು ಆತಂಕಕಾರಿ ಎಂದ ಅವರು, ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡಿದ ಅಬ್ದುಲ್ ಕಲಾಂ ಅವರು ರಾಷ್ಟçಪತಿಯಾದ ಮಾದರಿ ನಮ್ಮ ಮುಂದಿದೆ. ಇಂತಹ ಮೇರು ವ್ಯಕ್ತಿತ್ವವನ್ನು ವಿದ್ಯಾರ್ಥಿಗಳು ಮಾದರಿಯನ್ನಾಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಸೋಮವಾರಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಸರ್ಕಾರಿ ಶಾಲಾ ಮಕ್ಕಳನ್ನು ಗುರುತಿಸಿ ಸನ್ಮಾನ ಮಾಡುತ್ತಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಪ್ರಸನ್ನ ಅವರು, ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸಿ, ಅವುಗಳನ್ನು ಉಳಿಸಿ ಬೆಳೆಸುವ ಕಾರ್ಯ ಮಾಡಬೇಕೆಂದು ಕರೆ ನೀಡಿದರು.

ಮುಖ್ಯ ಅತಿಥಿಯಾಗಿದ್ದ ಮಾದಾಪುರ ಗ್ರಾ.ಪಂ. ಮಾಜಿ ಸದಸ್ಯ ಲತೀಫ್ ಅವರು ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳೂ ಸಹ ಎಲ್ಲಾ ಕ್ಷೇತ್ರಗಳಲ್ಲೂ ಸಾಧನೆ ತೋರುತ್ತಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ಉತ್ತಮ ಅವಕಾಶಗಳು ಲಭ್ಯವಿರುವುದರಿಂದ ವಿದ್ಯಾರ್ಥಿಗಳು ಅಲ್ಲಿಯೇ ಶಿಕ್ಷಣ ಪಡೆಯಲು ಮುಂದಾಗಬೇಕು ಎಂದರು.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಾಚರಣಿಯಂಡ ಅನು ಕಾರ್ಯಪ್ಪ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ಪಡೆದ ಅನೇಕ ವಿದ್ಯಾರ್ಥಿಗಳು ಇಂದು ಉನ್ನತ ಹುದ್ದೆಗಳನ್ನು ಅಲಂಕರಿಸಿ ಉತ್ತಮ ಜೀವನ ಕಟ್ಟಿಕೊಂಡಿದ್ದಾರೆ. ಸರ್ಕಾರಿ ಶಾಲೆಗಳು ಪ್ರತಿಭೆಗಳ ತೊಟ್ಟಿಲಾಗಿವೆ ಎಂದರು.

ಸರ್ಕಾರಿ ಶಾಲೆಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಕಿರಗಂದೂರು ಸರ್ಕಾರಿ ಪ್ರೌಢಶಾಲೆಯ ಅಶ್ವಧಿ, ನೇರುಗಳಲೆ ಪ್ರೌಢಶಾಲೆಯ ನಿರೀಕ್ಷಾ, ಪಿಯುಸಿ ವಿಭಾಗದಲ್ಲಿ ಸೋಮವಾರಪೇಟೆಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಅಂಕಿತ, ಐಗೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಯಶಸ್ವಿ, ಮಾದಾಪುರ ಮೊರಾರ್ಜಿ ಪದವಿ ಪೂರ್ವ ಕಾಲೇಜಿನ ಧ್ರುವ ಅವರುಗಳನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ಘಟಕದ ಅಧ್ಯಕ್ಷ ವಿಶ್ವ ಕುಂಬೂರು ವಹಿಸಿ ಮಾತನಾಡಿ ಮುಂದಿನ ದಿನಗಳಲ್ಲಿ ಸಂಘದ ವತಿಯಿಂದ ಇನ್ನಷ್ಟು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಆಡಳಿತ ಮಂಡಳಿ ಚಿಂತಿಸಿದೆ ಎಂದರು.

ವೇÃದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಎಸ್.ಡಿ.ವಿಜೇತ್ ಇದ್ದರು.

ಕಾರ್ಯಕ್ರಮವನ್ನು ಸಂಘದ ನಿರ್ದೇಶಕ ವಿಜಯ್ ಹಾನಗಲ್ ನಿರ್ವಹಿಸಿದರು. ದಿನೇಶ್ ಮಾಲಂಬಿ ವಂದಿಸಿದರು. ಸಂಘದ ಜಿಲ್ಲಾ ಉಪಾಧ್ಯಕ್ಷ ವಾಸು, ನಿರ್ದೇಶಕ ಚೆರಿಯಮನೆ ಸುರೇಶ್, ಸಂಘದ ಖಜಾಂಚಿ ಬಿ.ಎ. ಭಾಸ್ಕರ್, ಕಾರ್ಯದರ್ಶಿ ಭಾಸ್ಕರ್ ಮುಳ್ಳೂರು, ನಿರ್ದೇಶಕರಾದ ಹಿರಿಕರ ರವಿ, ಲಕ್ಷಿö್ಮÃಕಾಂತ್ ಕೊಮಾರಪ್ಪ, ಎಸ್.ಮಹೇಶ್, ಅವರುಗಳು ಉಪಸ್ಥಿತರಿದ್ದರು.

ಮುಖ್ಯ ಅತಿಥಿಯಾಗಿದ್ದ ಉದ್ಯಮಿ ಪ್ರಸನ್ನ ಎಡಿಕೇರಿ ಅವರು ಸಾಧಕ ವಿದ್ಯಾರ್ಥಿಗಳಿಗೆ ವೈಯಕ್ತಿಕವಾಗಿ ತಲಾ ರೂ. ೫ ಸಾವಿರ ಪ್ರೋತ್ಸಾಹಕ ಬಹುಮಾನ ನೀಡಿದರು. ಅಂತೆಯೇ ಪತ್ರಕರ್ತರ ಸಂಘದಿAದ ಸ್ಥಾಪನೆಯಾಗುವ ದತ್ತಿ ನಿಧಿಗೆ ರೂ. ೨೫ ಸಾವಿರ ದೇಣಿಗೆ ಘೋಷಿಸಿದರು. ಪತ್ರಕರ್ತರ ವರದಿಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ದತ್ತಿನಿಧಿ ಸ್ಥಾಪಿಸುತ್ತಿರುವುದಾಗಿ ತಿಳಿಸಿದರು. ಅಂತೆಯೇ ಸೋಮವಾರಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ದತ್ತಿ ನಿಧಿಗೆ ಮಾದಾಪುರ ಗ್ರಾ.ಪಂ. ಮಾಜಿ ಸದಸ್ಯ ಲತೀಫ್ ಅವರು ರೂ. ೧೦ ಸಾವಿರ ನೀಡಿದರು.