ವೀರಾಜಪೇಟೆ, ಜೂ. ೧೮: ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಹಾಗೂ ಆದಿವಾಸಿ ಅಧಿಕಾರ್ ರಾಷ್ಟಿçÃಯ ಮಂಚ್ ಸಂಯೋಜಿತ ಕೊಡಗು ಜಿಲ್ಲಾ ಸಮಿತಿಯ ನಾಲ್ಕನೇ ಜಿಲ್ಲಾ ಸಮಾವೇಶವು ನಗರದ ಟೀಚರ್ಸ್ ಕಾಂಪ್ಲೆಕ್ಸ್ನ ವೈ.ಕೆ. ಗಣೇಶ್ ಸಭಾಂಗಣದಲ್ಲಿ ಜಿಲ್ಲಾ ಅಧ್ಯಕ್ಷ ಪಿ.ಕೆ. ರಮೇಶ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಮೈಸೂರಿನ ಕರ್ನಾಟಕ ರಾಜ್ಯ ಬುಡಕಟ್ಟು ಸಂಸ್ಥೆಯ ಮೂಲ ಆದಿವಾಸಿಗಳ ಅಧ್ಯಯನ ಕೇಂದ್ರದ ಸಂಶೋಧನಾ ಅಧಿಕಾರಿ ಡಾ. ಕೃಷ್ಣಮೂರ್ತಿ ಮಾತನಾಡಿ, ಕೊಡಗು ಜಿಲ್ಲೆಯ ಆದಿವಾಸಿಗಳ ಜೀವನಶೈಲಿ, ಸಂಸ್ಕೃತಿ ಹಾಗೂ ಭಾಷೆ ವಿಶಿಷ್ಟವಾಗಿದ್ದು, ಶತಮಾನಗಳಿಂದ ಅರಣ್ಯವನ್ನು ಅವಲಂಬಿಸಿ ಬದುಕು ಸಾಗಿಸುತ್ತಿದ್ದಾರೆ. ಆದಿವಾಸಿಗಳ ಹೆಸರಿನಲ್ಲಿ ಸರ್ಕಾರ ಹಲವು ಯೋಜನೆಗಳನ್ನು ಘೋಷಿಸಿದರೂ ಅವು ನೈಜ ಫಲಾನುಭವಿಗಳಿಗೆ ಸಮರ್ಪಕವಾಗಿ ತಲುಪುತ್ತಿಲ್ಲ. ಕೊಡಗಿನ ತೋಟ ಪ್ರದೇಶಗಳಲ್ಲಿ ವಾಸಿಸುವ ಆದಿವಾಸಿಗಳು ಇನ್ನೂ ಸಾಮಾಜಿಕ ಹಾಗೂ ಆರ್ಥಿಕವಾಗಿ ಹಿಂದುಳಿದ ಸ್ಥಿತಿಯಲ್ಲಿದ್ದು, ಅವರ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ ಎಂದು ಅವರು ಒತ್ತಾಯಿಸಿದರು.

ಕಾರ್ಮಿಕ ಮುಖಂಡ ಪಿ.ಆರ್. ಭರತ್ ಮಾತನಾಡಿ, ಆದಿವಾಸಿಗಳು ಇಂದಿಗೂ ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿದ್ದು, ಅವರ ಹಕ್ಕುಗಳು ಹಾಗೂ ಸರ್ಕಾರಿ ಯೋಜನೆಗಳ ಸೌಲಭ್ಯಗಳು ನೇರವಾಗಿ ತಲುಪುವಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಸಮಾವೇಶದಲ್ಲಿ ತಾಲೂಕು ಸಮಿತಿಯನ್ನು ರಚಿಸಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ ಸಮಿತಿ ಮುಖಂಡರಾದ ಶಿವು, ರಾಮಕೃಷ್ಣ, ಅಶೋಕ, ಪ್ರೇಮ ಸೇರಿದಂತೆ ಆದಿವಾಸಿ ಹಾಗೂ ಬುಡಕಟ್ಟು ಜನಾಂಗದ ಮುಖಂಡರು ಮತ್ತು ಸದಸ್ಯರು ಉಪಸ್ಥಿತರಿದ್ದರು.