ಮಡಿಕೇರಿ ಜೂ. ೧೮: ಮಡಿಕೇರಿ ನಗರ ನಿವಾಸಿಗಳು, ಜೊತೆಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಅಪ್ಪಚ್ಚು ರೈಸ್ ಮಿಲ್ ಕ್ರಾಸ್ ರಸ್ತೆಯನ್ನು ಶೀಘ್ರ ಸಂಚಾರಕ್ಕಾಗಿ ಬಳಸುತ್ತಾರೆ. ಆದರೆ, ಇತ್ತೀಚೆಗೆ ಈ ರಸ್ತೆಯ ಒನ್ ವೇ ಪ್ರಾರಂಭದ ಹಾದಿಯಲ್ಲಿಯೇ ಪ್ರಪಾತ ಏರ್ಪಟ್ಟಿತ್ತು. ಅಲ್ಲದೆ, ರಸ್ತೆಯ ಮೇಲ್ಭಾಗದಲ್ಲಿಯೂ ಗುಂಡಿ ಬಿದ್ದಿತ್ತು.

ಇದರಿಂದ ವಾಹನಗಳನ್ನು ಚಾಲಿಸಲು ಹರ ಸಾಹಸ ಪಡಬೇಕಿತ್ತು. ವಾಹನಗಳಿಗೂ ದುರಸ್ತಿಗೊಳ್ಳುವಷ್ಟು ಜಖಂ ಆಗುತ್ತಿತ್ತು. ಇನ್ನೂ ಅನೇಕ ವಾಹನಗಳು ಈ ರಸ್ತೆಯನ್ನು ಬಿಟ್ಟು ಮುಖ್ಯ ರಸ್ತೆಯಲ್ಲಿ ತೆರಳಿದರೆ ಮುಖ್ಯ ರಸ್ತೆ, ಚೌಕ್ ಹಾಗೂ ಕಾಲೇಜು ರಸ್ತೆಗಳಲ್ಲಿನ ವಾಹನ ದಟ್ಟಣೆಯಿಂದಾಗಿ ತೀರಾ ನಿಧಾನವಾಗಿ ಚಲಿಸುತ್ತ ವಿಳಂಬವಾಗುತ್ತಿತ್ತು. ಕೆಲವು ವಾಹನಗಳು ಈ ಎರಡೂ ರಸ್ತೆಯನ್ನು ಬಿಟ್ಟು ಈ ಹಿಂದೆ ಸಬ್ ರಿಜಿಸ್ಟಾçರ್ ಕಚೇರಿಯಿದ್ದ ಗೌಳಿಬೀದಿಗಾಗಿ ಸಂಚರಿಸಿ ರಾಜಾಸೀಟು ಮುಖ್ಯ ರಸ್ತೆಗೆ ಸೇರುವ ಮೂಲಕ ತೆರಳುವಂತಹ ಅನಿವಾರ್ಯ ಪರಿಸ್ಥಿತಿ ಉಂಟಾಗಿತ್ತು. ಆದರೆ, ಗೌಳಿಬೀದಿಯ ಪ್ರಾರಂಭದ ಹಂತದಲ್ಲಿ ಭಾರೀ ಹೊಂಡ ಏರ್ಪಟ್ಟು ಅಲ್ಲಿಯೂ ಸಂಚಾರ ವ್ಯತ್ಯಯ ಉಂಟಾಗಿ ವಾಹನಗಳ ದಟ್ಟಣೆಯಿಂದಾಗಿ ಚಾಲನೆಗೆ ತೊಡಕುಂಟಾಗಿತ್ತು. ಈ ಕುರಿತು “ಶಕ್ತಿ” ಗೆ ಬಂದ ದೂರುಗಳÀ ಅನ್ವಯ ನಗರಸಭಾ ಉಪಾಧ್ಯಕ್ಷ ಮಹೇಶ್ ಜೈನಿ ಹಾಗೂ ನಗರಸಭಾ ಸದಸ್ಯ ಅರುಣ್ ಶೆಟ್ಟಿ ಇವರುಗಳ ಗಮನಕ್ಕೆ ತರಲಾಗಿತ್ತು. ಇದೀಗ ಶೈತ್ಯ ವಾತಾವರಣದಲ್ಲಿ ಟಾರಿಂಗ್ ಕೆಲಸ ಕಷ್ಟ ಸಾಧ್ಯವಾದುದರಿಂದ ಜಲ್ಲಿ, ಕಲ್ಲು, ಇಟ್ಟಿಗೆ ಮೊದಲಾದ ಸಾಮಗ್ರಿಗಳ ಮಿಶ್ರಣ ಬಳಸಿ ಈ ಎಲ್ಲ ರಸ್ತೆಗಳ ಗುಂಡಿಗಳನ್ನು ಗುರುವಾರ ಬೆಳಿಗ್ಗೆ ನಗರಸಭಾ ಸಿಬ್ಬಂದಿ ಮೂಲಕ ಮಹೇಶ್ ಜೈನಿ ಹಾಗೂ ಅರುಣ್ ಶೆಟ್ಟಿ ನೇತೃತ್ವ ವಹಿಸಿ ಮುಚ್ಚಿಸಿದ್ದು ಸ್ಪಂದಿಸಿದ್ದಾರೆ.