ಮಡಿಕೇರಿ, ಜೂ. ೨೨: ಸಾರಿಗೆ ಇಲಾಖೆ ಹಾಗೂ ಪೊಲೀಸ್ ಇಲಾಖೆಯ ಇ-ಚಲನ್ ಮೂಲಕ ದಾಖಲಾಗಿರುವ ಬಾಕಿ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ದಂಡ ಪಾವತಿಗೆ ರಾಜ್ಯ ಸರ್ಕಾರ ಶೇ.೫೦ ರಷ್ಟು ರಿಯಾಯಿತಿ ಘೋಷಿಸಿದ್ದು, ಜುಲೈ ೧೦ರವರೆಗೆ ನಡೆಯಲಿರುವ ವಿಶೇಷ ಅಭಿಯಾನವನ್ನು ವಾಹನ ಸವಾರರು ಸದುಪಯೋಗಪಡಿಸಿಕೊಳ್ಳುವಂತೆ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಕೊಡಗು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶುಭ ಅವರು ಕರೆ ನೀಡಿದರು.
ನಗರದ ಜಿಲ್ಲಾ ನ್ಯಾಯಾಲಯದಲ್ಲಿ ೧೯೯೧ರಿಂದ ೨೦೨೨ರ ಅವಧಿಯಲ್ಲಿ ದಾಖಲಾಗಿ ಪಾವತಿಗೆ ಬಾಕಿ ಇರುವ ಪ್ರಕರಣಗಳ ದಂಡ ಮೊತ್ತಕ್ಕೆ ಶೇ.೫೦ ರಷ್ಟು ರಿಯಾಯಿತಿ ನೀಡಿ ಪ್ರಕರಣಗಳನ್ನು ಇತ್ಯರ್ಥಗೊಳಿಸುವ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ರಾಜ್ಯ ಸರ್ಕಾರವು ಸಾರಿಗೆ ಇಲಾಖೆ ಹಾಗೂ ಸಂಚಾರ ಪೊಲೀಸ್ ಇಲಾಖೆಯ ಬಾಕಿ ದಂಡಗಳ ಮೇಲೆ ವಿಶೇಷ ರಿಯಾಯಿತಿ ನೀಡಿದ್ದು, ವಾಹನ ಸವಾರರು ತಮ್ಮ ಮೇಲಿರುವ ದಂಡದ ಹೊರೆಯನ್ನು ಅರ್ಧಕ್ಕಿಳಿಸಿಕೊಳ್ಳಲು ಜೂನ್ ೨೧ರಿಂದ ಜುಲೈ ೧೦ರವರೆಗೆ ಅವಕಾಶ ಕಲ್ಪಿಸಲಾಗಿದೆ. ಹಳೆಯ ಪ್ರಕರಣಗಳನ್ನು ವಿಲೇವಾರಿ ಮಾಡುವ ಉದ್ದೇಶದಿಂದ ಈ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಯಾವುದೇ ಆತಂಕವಿಲ್ಲದೆ ವಾಹನ ಸವಾರರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಅವರು ತಿಳಿಸಿದರು.
ಸಾರಿಗೆ ಮೋಟಾರು ವಾಹನ ನಿರೀಕ್ಷಕ ಮೋಹನ್ ಕುಮಾರ್ ಮಾತನಾಡಿ, ೧೯೯೧ರಿಂದ ೨೦೨೨ರ ಅವಧಿಯಲ್ಲಿ ಮೋಟಾರು ವಾಹನ ಕಾಯ್ದೆ ಉಲ್ಲಂಘನೆ ಹಿನ್ನೆಲೆಯಲ್ಲಿ ಸಾರಿಗೆ ಇಲಾಖೆಯಿಂದ ದಾಖಲಾಗಿರುವ ಚಾಲನಾ ಪರವಾನಗಿ, ವಿಮೆ, ಎಮಿಷನ್ ಪರೀಕ್ಷೆ ಸೇರಿದಂತೆ ವಿವಿಧ ದಾಖಲೆಗಳ ಕೊರತೆಯಿಂದ ದಾಖಲಾಗಿರುವ ಪ್ರಕರಣಗಳನ್ನು ಈ ಯೋಜನೆಯಡಿ ಸುಲಭವಾಗಿ ಇತ್ಯರ್ಥಪಡಿಸಿಕೊಳ್ಳಬಹುದು ಎಂದರು.
ಇದೇ ವೇಳೆ, ಮೇ ೨೦೨೬ರೊಳಗೆ ಪೊಲೀಸ್ ಇಲಾಖೆಯಿಂದ ದಾಖಲಾಗಿರುವ ಎಲ್ಲಾ ಬಾಕಿ ಟ್ರಾಫಿಕ್ ಇ-ಚಲನ್ ದಂಡಗಳಿಗೂ ಶೇ.೫೦ ರಷ್ಟು ರಿಯಾಯಿತಿ ಅನ್ವಯವಾಗಲಿದೆ ಎಂದು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಸಾರಿಗೆ ಇಲಾಖೆಯ ಅಧೀಕ್ಷಕ ಮೋಹನ್ ಹಾಗೂ ಸಲೀಮಾ, ಪ್ರಧಾನ ಕಾನೂನು ನೆರವು ಅಭಿರಕ್ಷಕರಾದ ಮೈಮೂನ, ವಕೀಲರು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು. ಆಡಳಿತ ಸಹಾಯಕ ಜಯಪ್ಪ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.