ಶನಿವಾರಸಂತೆ, ಜೂ.೨೨ : ಬರಹಗಾರರು ಪರಸ್ಪರ ಪ್ರೋತ್ಸಾಹಿಸುವ ಮೂಲಕ ಒಡನಾಟ ಬೆಳೆಸಿಕೊಂಡು ಆ ಒಡನಾಟದಿಂದ ಸಾಹಿತ್ಯದ ಅಭಿರುಚಿ ಬೆಳೆಸಿಕೊಳ್ಳಬೇಕು ಎಂದು ಚಿಕ್ಕ ಅಳುವಾರದ ಕೊಡಗು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಜಮೀರ್ ಅಹಮ್ಮದ್ ಅಭಿಪ್ರಾಯ ವ್ಯಕ್ತಪಡಿಸಿದರು.

ಶನಿವಾರಸಂತೆಯ ವಿಶ್ವಕರ್ಮ ರಸ್ತೆಯಲ್ಲಿರುವ ನಾಟ್ಯ ಸದನದ, ನಾಟ್ಯ ಮಿಲನ ನೃತ್ಯ ಶಾಲಾ ಸಭಾಂಗಣದಲ್ಲಿ ಕೊಡಗು ಅಭಿನಯ ಕಲಾ ಮಿಲನ ಚಾರಿಟಬಲ್ ಟ್ರಸ್ಟ್ ಹಾಗೂ ಕುಶಾಲನಗರ ಕಣಿವೆ ಕಟ್ಟೆ ಸಂಯುಕ್ತ ಆಶ್ರಯದಲ್ಲಿ ನಡೆದ ‘’ಸಾಹಿತಿ ಶ.ಗ.ನಯನತಾರಾ ಅವರ ಕೃತಿಗಳನ್ನು ಓದೋಣ’’ ಎಂಬ ಸಾಹಿತಿ ನಯನತಾರಾ ಅವರ ಕೃತಿಗಳನ್ನು ಪರಿಚಯಿಸುವ ಸಾಹಿತ್ಯಾತ್ಮಕ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಮಾನ ಮನಸ್ಕರರಿಗೆ ಸಮಾನ ವೇದಿಕೆ ದೊರಕಬೇಕು. ಬರಹಗಾರರು ಬರಹಗಳನ್ನು ಓದಬೇಕು. ಬರಹಗಾರರಿಗೆ ಬೇಕಾಗಿರುವುದು ಕವಿ ಮತ್ತು ಸಹೃದಯಿ. ಓದುವ ಪಾತ್ರದಲ್ಲಿ ಸಂವೇದನೆ ಇದ್ದು ನಾವೇ ಪಾತ್ರವಾಗಬೇಕು.ಕೊಡಗಿನ ಮಣ್ಣಿನ ಗುಣವೆಂದರೆ ಕನ್ನಡ ಸೇವೆಯಲ್ಲಿ ತೊಡಗಿಸಿಕೊಂಡು ರಚಿಸುವ ಕೃತಿ ಸಮಾಜಕ್ಕೆ ಕೊಡಗೆಯಾಗಬೇಕು ಎಂದು ಹೇಳಿದರು.

ಸೋಮವಾರಪೇಟೆ ಸಾಹಿತಿಗಳಾದ ಜಲಾ ಕಾಳಪ್ಪ ಅವರು “ಶನಿವಾರಸಂತೆ-ಕೊಡ್ಲಿಪೇಟೆ; ಒಂದು ಸಾಂಸ್ಕೃತಿಕ ಪಕ್ಷಿನೋಟ’’ ಕೃತಿ, ಸಾಹಿತಿ ಶರ್ಮಿಳಾ ರಮೇಶ್ ಅವರು ‘’ಕೊಡಗಿನ ಗೌರಮ್ಮನವರ ಕಥೆಗಳಲ್ಲಿ ಪರಿವರ್ತನೆಯ ಚಿಂತನೆಗಳು’’ ಕೃತಿ, ಮಡಿಕೇರಿಯ ಬರಹಗಾರ ರಂಜಿತ್ ಕವಲಪಾರ ಅವರು ‘’ ಹೊಸ ಬೆಳಕಿನತ್ತ’’ ಕಥಾ ಸಂಕಲನ, ಯಡವನಾಡು ಲೇಖಕ ಹೇಮಂತ್ ಪಾರೇರ ಅವರು ‘’ಭಾವನಾ ತರಂಗ’’ ಕವನ ಸಂಕಲನ’’ ಕುಶಾಲನಗರ ಸಾಹಿತಿ ಸುನೀತಾ ಲೋಕೇಶ್,ಅವರು ‘’ವೈವಿಧ್ಯತೆಯಲ್ಲಿ ಅರಳಿದ ವೈಚಾರಿಕ ಲೇಖನಗಳು’’ ಕೃತಿ, ಗಳ ಬಗ್ಗೆ ವಿಮರ್ಶಾತ್ಮಕ ಮಾತನಾಡಿದರು. ಗಾಯಕಿ ತೇಜಾವತಿ ಭಾವಗೀತೆಗಳನ್ನು ಹಾಡಿ ಮನರಂಜಿಸಿದರು. ಪಿಯುಸಿ ಪರೀಕ್ಷೆಯಲ್ಲಿ ಅಧಿಕ ಅಂಕ ಗಳಿಸಿದ ಸೋಮವಾರಪೇಟೆಯ ವಿದ್ಯಾರ್ಥಿ ಪವನ್ ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಹಾಡು. ಹರಟೆ, ವೇದಿಕೆ ಗಣ್ಯರ ಹಾಗೂ ಸಾಹಿತಿಗಳ ಸನ್ಮಾನ ಕಾರ್ಯಕ್ರಮವೂ ನಡೆಯಿತು.

ಸಾಹಿತಿ ಸ್ಮಿತಾ ಅಮೃತ ರಾಜ್ ಮಾತನಾಡಿ, ಸಾಹಿತ್ಯಾತ್ಮಕ ಕಾರ್ಯಕ್ರಮ ರಕ್ತ ಸಂಬAಧಕ್ಕಿAತಲೂ ಮಿಗಿಲಾದ ಸಂಬAಧ ಬೆಸೆವ ಕಾರ್ಯಕ್ರಮವಾಗಿರುತ್ತದೆ. ಬರಹಗಳ ಚರ್ಚೆಯಿಂದ ಬರಹಗಾರರ ಅನುಭವಗಳ ಚರ್ಚೆಯಾಗಿ ಭ್ರಮೆ ಹರಿಯುತ್ತದೆ. ಬರಹಗಾರನಿಗೆ ಇಣುಕಿ ನೋಡುವ ವ್ಯಕ್ತಿತ್ವದೊಂದಿಗೆ ಇಚ್ಛಾಶಕ್ತಿ ಹುಟ್ಟಬೇಕು. ಬಹುಮುಖ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ನಾಟ್ಯ ಮಿಲನ ನೃತ್ಯ ಶಾಲೆಯ ಕಲಾವಿದೆ ಹಾಗೂ ಸಾಹಿತಿ ಮಿಲನ ಕೆ.ಭರತ್ ತಮ್ಮ ಇಚ್ಛಾಶಕ್ತಿಯಿಂದ ನೃತ್ಯ, ಸಂಗೀತ, ಸಾಹಿತ್ಯದಲ್ಲಿ ತೊಡಗಿ ತನ್ನ ಮನೆಯಲ್ಲಿ ತನ್ನವರಲ್ಲದವರ ಪುಸ್ತಕಗಳ ಅನಾವರಣ ಮಾಡುವ ಮೂಲಕ ಹೃದಯ ವೈಶಾಲ್ಯ ಮೆರೆದಿದ್ದಾರೆ ಎಂದು ಪ್ರಶಂಶಿಸಿದರು.

ಅಭಿನಯ ಕಲಾ ಮಿಲನ ಚಾರಿಟಬಲ್ ಟ್ರಸ್ಟ್ ನ ಟ್ರಸ್ಟಿ ಕುದುಕುಳಿ ಜೆ. ಭರತ್ ಮಾತನಾಡಿ, ಸಾಹಿತ್ಯ ಕ್ಷೇತ್ರದಲ್ಲಿ ಸಮಸ್ಯೆಗಳು ಸಹಜ.ಆದರೆ, ಸಾಹಿತ್ಯ ಬೆಳೆಯಲು ಸಮಾಜದ ವಿರೋಧವಿಲ್ಲ ಎಂದು ಶುಭ ಹಾರೈಸಿದರು.

ಸಾಹಿತಿ ಶ.ಗ.ನಯನತಾರಾ ಧನ್ಯತಾ ನುಡಿಗಳನ್ನಾಡಿ, ಬದುಕಿನ ಅನುಭವಗಳ ಸುಂದರ ಅಭಿವ್ಯಕ್ತಿಯೇ ಸಾಹಿತ್ಯ. ನೈಜ ಘಟನೆಗಳನ್ನಾಧರಿಸಿಯೇ ನಾನು ಸಾಹಿತ್ಯ ರಚಿಸಿದ್ದು ನನ್ನ ೫ ಕೃತಿಗಳನ್ನು ಐವರು ಸಾಹಿತಿಗಳ ಮೂಲಕ ಅನಾವರಣಗೊಳಿಸುವ ಸಾಹಿತ್ಯ ಕಾರ್ಯಕ್ರಮವನ್ನು ಕಣಿವೆ ಕಟ್ಟೆಯ ಸಹಯೋಗದಲ್ಲಿ ಆಯೋಜಿಸಿದ ಕಲಾವಿದೆ ಮಿಲನಾ ಭರತ್ ಸಾಹಿತ್ಯ ಲೋಕದಲ್ಲಿ ಪ್ರಥಮ ಬಾರಿಗೆ ಸಾಹಿತಿಯ ಪುಸ್ತಕಗಳ ಅನಾವರಣ ಕಾರ್ಯಕ್ರಮ ಹಮ್ಮಿಕೊಂಡಿರುವುದು ಪ್ರಶಂಶೆಗೆ ಕಾರಣವಾಗಿದೆ ಎಂದರು.

ಅಭಿನಯ ಕಲಾ ಮಿಲನ ಚಾರಿಟಬಲ್ ಟ್ರಸ್ಟ್ ನ ಟ್ರಸ್ಟಿ ಮಿಲನಾ ಭರತ್ ಪ್ರಾಸ್ತಾವಿಕ ನುಡಿಗಳನ್ನಾಡಿ, ಕಾರ್ಯಕ್ರಮ ಉದ್ದೇಶದ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದರು. ಕಸಾಪ ಹೋಬಳಿ ಘಟಕದ ಅಧ್ಯಕ್ಷ ಬಿ.ಬಿ.ನಾಗರಾಜ್, ದುಂಡಳ್ಳಿ ಡಿಜಿಟಲ್ ಗ್ರಂಥಾಲಯ ಮೇಲ್ವಿಚಾರಕಿ ಎಸ್.ಪಿ.ದಿವ್ಯಾ, ಗ್ರಾಮ ಪಂಚಾಯಿತಿ ಮಾಜಿ ಸದಸ್ಯೆ ಎಸ್.ಪಿ.ಭಾಗ್ಯಾ ಮಾತನಾಡಿದರು.

ಕಾರ್ಯಕ್ರಮದ ಸಾರಥ್ಯ ವಹಿಸಿದ್ದ ಭಾರದ್ವಾಜ ಕೆ.ಆನಂದತೀರ್ಥ ಮಾತನಾಡಿ, ಬರಹಗಾರ ಬರಹ ಆರಂಭಿಸಿದಾಗ ಧರ್ಮ-ಜಾತಿ, ವಯಸ್ಸು, ರಾಜಕೀಯ ಕೆಲಸ ಮಾತನಾಡುತ್ತದೆ. ಹೊಗಳಿಕೆಯ ಅಗತ್ಯವಿಲ್ಲ. ಬರಗಾರರು ಹಾಗೂ ವಿಮರ್ಶಕರಲ್ಲಿ ಸಮಯಪ್ರಜ್ಞೆ ಮುಖ್ಯ ಎಂದರು.

ಸಾಹಿತಿ ಲಾವಣ್ಯ ಮೋಹನ್, ಕಣಿವೆ ಕಟ್ಟೆ ಸಂಚಾಲಕ ಉಮೇಶ್, ಚಾರಿಟಬಲ್ ಟ್ರಸ್ಟ್ ನ ಟ್ರಸ್ಟಿಗಳಾದ ಜಿತೇಂದ್ರ, ಇಂದಿರಾ ಭರತ್, ಪುಣ್ಯ ಪ್ರಾಂಜಲಿ, ಹೇಮಂತ್, ಶಿಕ್ಷಕಿಯರಾದ ಕವಿತಾ, ಜ್ಯೋತಿ ನಿರಂಜನ್, ಸಂಗೀತ ಶಿಕ್ಷಕಿ ರೋಸಿ, ಇತರರು ಹಾಜರಿದ್ದರು. ಜಿತೇಂದ್ರ ಪ್ರಾರ್ಥಿಸಿ, ಮಿಲನಾ ಭರತ್ ಸ್ವಾಗತಿಸಿ, ವಂದಿಸಿದರು.