ಸಿದ್ದಾಪುರ, ಜೂ. ೨೫: ಕೆಲಸ ಮಾಡುತ್ತಿದ್ದ ಸಂದರ್ಭ ಏಕಾಏಕಿ ಕಾರ್ಮಿಕ ಮಹಿಳೆ ಸೌಮ್ಯ (೩೪)ಎಂಬವರ ಮೇಲೆ ಕಾಡಾನೆ ದಾಳಿಗೆ ಮುಂದಾಗಿದ್ದು ಕಾಡಾನೆಯನ್ನು ಕಂಡು ಭಯದಿಂದ ಓಡುವ ಸಂದರ್ಭ ಕಾಲು ಜಾರಿ ಬಿದ್ದು ಗಾಯಗೊಂಡಿರುವ ಘಟನೆ ಸಿದ್ದಾಪುರ ಸಮಿಪದ ಗುಹ್ಯ ಗ್ರಾಮದ ಪಲ್ಲಕೆರೆಯ ಕಾಫಿ ತೋಟದೊಳಗೆ ನಡೆದಿದೆ.
ಖಾಸಗಿ ಸಂಸ್ಥೆಯ ಕಾಫಿ ತೋಟದಲ್ಲಿ ಆನೆ ಟ್ರಾö್ಯಕರ್ ಕೆಲಸ ಮಾಡಿಕೊಂಡಿರುವ ನಾಗರಾಜ್ ಎಂಬವರ ಪತ್ನಿ, ಪಲ್ಲಕೆರೆಯ ಕಾರ್ಮಿಕ ಮಹಿಳೆ ಸೌಮ್ಯ ಕೆಲಸ ಮಾಡಿಕೊಂಡಿದ್ದ ಸಂದರ್ಭ ಪಕ್ಕದ ತೋಟದಲ್ಲಿ ಮಡಿಕೇರಿ ವಲಯ ಅರಣ್ಯ ವ್ಯಾಪ್ತಿಯ ಅರೆಕಾಡು ಭಾಗದಿಂದ ನದಿ ದಾಟಿ ಕಾಫಿ ತೋಟಗಳ ಮೂಲಕ ಕಾಡಾನೆಗಳ ಗುಂಪು ಸಂಚರಿಸುತ್ತಿತ್ತು ಎನ್ನಲಾಗಿದೆ. ಈ ವೇಳೆ ಕಾಡಾನೆಗಳ ಹಿಂಡಿನಲ್ಲಿದ್ದ ಕಾಡಾನೆಯೊಂದು ಬೇರ್ಪಟ್ಟು ಏಕಾಏಕಿ ಸೌಮ್ಯ ಬಳಿಗೆ ಆಗಮಿಸಿದ್ದು ಇದನ್ನು ಕಂಡ ಸೌಮ್ಯ ಭಯಗೊಂಡ ಓಡಿದ್ದಾರೆ.
ಈ ಸಂದರ್ಭ ಕಾಲು ಜಾರಿ ಬಿದ್ದು ಸಣ್ಣ ಪುಟ್ಟ ಗಾಯಗೊಂಡಿದ್ದು, ಕಾಡಾನೆ ದಾಳಿಯಿಂದ ಪಾರಾಗಿದ್ದಾರೆ. ಗಾಯಗೊಂಡ ಮಹಿಳೆಗೆ ಕೂಡಲೇ ಸ್ಥಳೀಯರು ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ.
ಈ ಬಗ್ಗೆ ಮಾಹಿತಿ ತಿಳಿದ ವೀರಾಜಪೇಟೆ ವಲಯ ಅರಣ್ಯ ಅಧಿಕಾರಿ ಶಿವರಾಂ ಅವರ ಮಾರ್ಗದರ್ಶನದಲ್ಲಿ ಅರಣ್ಯ ಇಲಾಖೆಯ ಅಮ್ಮತ್ತಿ ಶಾಖೆಯ ಉಪ ವಲಯ ಅರಣ್ಯ ಅಧಿಕಾರಿ ಮನೋಜ್ ಹಾಗೂ ಸಿಬ್ಬಂದಿ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಆ ಭಾಗದಲ್ಲಿ ಬೀಡು ಬಿಟ್ಟಿರುವ ಕಾಡಾನೆಗಳನ್ನು ಕಾಡಿಗಟ್ಟುವ ಕಾರ್ಯಾಚರಣೆ ನಡೆಸಿದರು.
- ವಾಸು